ಮಹಿಳೆಯರಿಗೆ ಕನ್ನಡಿಗರ ಮನ್ನಣೆ

bkt-14-2
ನಾಡೋಜ ಮನು ಬಳಿಗಾರ
Published on

ಬಾಗಲಕೋಟೆ: ಸ್ತ್ರೀಯರನ್ನು ದೇವತೆಗಳ ರೂಪದಲ್ಲಿ ಗೌರವಿಸುವ ಏಕೈಕ ದೇಶ ನಮ್ಮದು. ಕಲೆ, ಸಾಹಿತ್ಯ, ವಿಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಕರ್ನಾಟಕವು ಮಹಿಳೆಯರಿಗೆ ಮೊದಲ ಸ್ಥಾನ ನೀಡಿರುವುದು ಹಮ್ಮೆಯ ಸಂಗತಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ, ನಾಡೋಜ ಮನು ಬಳಿಗಾರ ಹೇಳಿದರು.
ನಗರದ ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ೧೭ನೆಯ ಶಕ್ತಿ ಸಂಭ್ರಮ ಅಂತರ ಮಹಿಳಾ ಮಹಾವಿದ್ಯಾಲಯಗಳ ಯುವಜನೋತ್ಸವ ಕಾರ್ಯಕ್ರಮದ ಬುಧವಾರ ಸಂಜೆ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಅಕ್ಕ ಮಹಾದೇವಿಯು ಕನ್ನಡದ ಮೊದಲ ಕವಿಯತ್ರಿಯಾಗಿದ್ದು, ಅದಕ್ಕಿಂತ ಮೊದಲು ಹನ್ನೊಂದರ ಶತಮಾನದಲ್ಲಿ ಬೀದರ್ ಜಿಲ್ಲೆಯ ಹುಮನಾಬಾದ್ ದಲ್ಲಿ ಅನಾಮಿಕ ಕವಿಯತ್ರಿಯೊಬ್ಬಳು ಕಾವ್ಯರಚನೆ ಮಾಡುತ್ತಿದ್ದಳು ಎಂಬ ಉಲ್ಲೇಖವಿದೆ. ಇದು ಮಹಿಳೆಯರಿಗೆ ಕನ್ನಡಿಗರು ಕೊಡುವ ಗೌರವದ ಸಂಕೇತ ಎಂದರು.
ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಯಶವಂತ ಸರದೇಶಪಾಂಡೆ ಮಾತನಾಡಿ, ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಒತ್ತಾಯ ಪೂರ್ವಕವಾಗಿ ಭಾಗವಹಿಸದೆ ಕೌಶಲ ಅಭಿವೃದ್ಧಿ ಮತ್ತು ಪ್ರತಿಭೆಗಳನ್ನು ಅನಾವರಣಗೊಳಿಸಲು ಆಸಕ್ತಿಯಿಂದ ಪಾಲ್ಗೊಳ್ಳಬೇಕು. ತಂತ್ರಜ್ಞಾನ ಯುಗದಲ್ಲಿ ಯುವಶಕ್ತಿಯು ಕೇವಲ ಮೊಬೈಲ್‌ನತ್ತ ವಾಲುತ್ತಿದ್ದು ಸಾಹಿತ್ಯದಿಂದ ದೂರ ಉಳಿಯುತ್ತಿರುವುದು ಖೇದಕರ ಸಂಗತಿ. ಇದರಿಂದ ಏಕಾಗ್ರತೆ ಕಳೆದುಕೊಳ್ಳುತ್ತಿದ್ದಾರೆ. ಪಠ್ಯೇತರ ಚಟುವಟಿಕೆಗಳಿಂದ ಮನಸ್ಸು ನಿಯಂತ್ರಣ ಮಾಡಲು ಸಾಧ್ಯ. ಅವಲೋಕನ, ಕಲ್ಪನೆ ಮತ್ತು ಪ್ರಸ್ತುತಪಡಿಸುವಿಕೆಯೊಂದಿಗೆ ಉತ್ತಮ ಕಾರ್ಯಗಳನ್ನು ಗುರುತಿಸುವ ಕೌಶಲ್ಯಗಳನ್ನು ವಿದ್ಯಾರ್ಥಿ ಜೀವನದಲ್ಲಿ ಬೆಳಸಿಕೊಳ್ಳಬೇಕು. ಇದರಿಂದ ಮಾದರಿ ವ್ಯಕ್ತಿಗಳಾಗಲು ಸಾಧ್ಯ ಎಂದರು.
ಅಕ್ಕಮಹಾದೇವಿ ಮಹಿಳಾ ವಿವಿಯ ಕುಲ ಸಚಿವ ಪ್ರೊ.ಬಿ.ಎಸ್ ನಾವಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ್ ಅಥಣಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಪ್ರಾಚಾರ್ಯ ಎಸ್.ಜೆ.ವಡೆಯರ, ಪ್ರೊ.ಪಿ.ಜಿ ತಡಸದ, ಪ್ರೊ.ವಿ.ಬಿ.ಕೋರಿಶೆಟ್ಟಿ ಸೇರಿದಂತೆ ವಿವಿಧ ಕಾಲೇಜು ಪ್ರಾಚಾರ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net