ಮಹಿಳೆಯರಿಗೂ ಸಮಾನ ಅವಕಾಶ ಕಲ್ಪಿಸಬೇಕು

Women
Published on

ಚಿತ್ರದುರ್ಗ: ಪ್ರತಿ ಕ್ಷೇತ್ರದಲ್ಲೂ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿದಲ್ಲಿ ಬಲಿಷ್ಠ, ಆರೋಗ್ಯಪೂರ್ಣ, ಸಮಸಮಾಜ ನಿರ್ಮಿಸಲು ಸಾಧ್ಯ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಸಲಹೆ ನೀಡಿದರು.

ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಿಂದ ಶನಿವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯ ಸಾನ್ನಿಧ್ಯವಹಿಸಿ ಮಾತನಾಡಿದರು.

ಮಹಿಳೆ ಎಲ್ಲ ರಂಗದಲ್ಲೂ ಸಾಧಕಿಯಾಗಿ ಛಾಪು ಮೂಡಿಸುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಮೇಲುಗೈ ಹೊಂದಿದ್ದಾರೆ. ಹೀಗಾಗಿ ಪ್ರತಿಭೆಗೆ ತಕ್ಕ ಅವಕಾಶ ನೀಡಿದರೆ, ಅಭಿವೃದ್ಧಿಯ ನಾಡು ನಿರ್ಮಾಣವಾಗಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಮಹಿಳೆಯರಿಗೆ ಅತ್ಯಂತ ಗೌರವ ಮತ್ತು ಉನ್ನತ ಸ್ಥಾನ ನೀಡಿದ್ದು 12ನೇ ಶತಮಾನ. ಲಿಂಗ ಅಸಮಾನತೆ ತೊಡೆದು ಹಾಕಿದ್ದರಿಂದ 33 ಮಂದಿ ಅನುಭವ ಮಂಟಪದಲ್ಲಿ ಅವಕಾಶ ಪಡೆದರಲ್ಲದೆ, ಅವರೆಲ್ಲರೂ ಸಮಾಜಮುಖಿ ಚಿಂತನೆಯೊಂದಿಗೆ ವಚನಗಳನ್ನು ರಚಿಸಿದ್ದು ಬಹುದೊಡ್ಡ ಇತಿಹಾಸವಾಗಿ ಉಳಿದಿದೆ ಎಂದರು.

ಹೆಣ್ಣು ಸಮಾಜದ ಕಣ್ಣು. ಅಲ್ಲದೆ, ಸಂಸಾರದ ಜವಾಬ್ದಾರಿ ಸಮರ್ಪಕವಾಗಿ ನಿಭಾಯಿಸುವ ತಾಕತ್ತು ಇದೆ. ಅದಕ್ಕೆ ಅವರಲ್ಲಿನ ತಾಳ್ಮೆ, ಸಹನೆ ಮುಖ್ಯ ಕಾರಣವಾಗಿದೆ. ಇನ್ನೂ ಕೂಡ ಕೆಲ ಕ್ಷೇತ್ರಗಳಲ್ಲಿ ಧೈರ್ಯದಿಂದ ಭಾಗವಹಿಸಲು ಮುಜುಗರ, ಅಂಜಿಕೆ ಪಡುತ್ತಿದ್ದು, ದಿಟ್ಟತನದಿಂದ ಪ್ರವೇಶಿಸಿದರೆ ಯಶಸ್ಸು ಶತಸಿದ್ಧ ಎಂದು ಸಲಹೆ ನೀಡಿದರು.

ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಮಾನ ಅಲಂಕರಿಸಿ, ಸಮಾಜಕ್ಕೆ ಕೊಡುಗೆ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆ. ಇದು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಮುಂದುವರಿಯಬೇಕೆಂದು ಆಶಿಸಿದರು.

ಮಹಾವಿದ್ಯಾಲಯದ ಡೀನ್ ಡಾ. ಪ್ರಶಾಂತ್, ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ್, ಡಾ. ಲತಾ, ಡಾ. ನಂದಿನಿ, ಡಾ. ನಾಗೇಂದ್ರಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net