

ಮುದ್ದೇಬಿಹಾಳ: ಅವರವರ ಧರ್ಮ, ಆಚರಣೆಗಳು ಅವರಿಗೆ ಶ್ರೇಷ್ಠ. ಆದರೆ ಯಾರೊಬ್ಬರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಬೇಕಾದದ್ದು ನಮ್ಮ ಕರ್ತವ್ಯ. ಭಾರತೀಯ ಸಂಸ್ಕೃತಿ, ಸಂಪ್ರದಾಯಗಳನ್ನು ಅವಮಾನಿಸುವುದು ಸರಿಯಲ್ಲ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಚೆನ್ನವೀರ ದೇವರು ಹೇಳಿದರು.
ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ಏರ್ಪಡಿಸಿದ್ದ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ಮಹಿಳೆಯರು ಭಾರತೀಯ ಸಂಸ್ಕೃತಿ, ಆಚಾರ, ಸಂಪ್ರದಾಯಗಳನ್ನು ಜೀವಂತವಾಗಿಟ್ಟಿದ್ದಾರೆ ಎಂದರು.
ಪತ್ರಕರ್ತ ಡಿ.ಬಿ. ವಡವಡಗಿ ಮಾತನಾಡಿ, ಆದಿ ಕಾಲದಿಂದಲೂ ಹೆಣ್ಣುಮಕ್ಕಳನ್ನು ಶಕ್ತಿ, ದೇವತೆ ಎಂದು ಭಾವಿಸಿಕೊಂಡು ಬರಲಾಗುತ್ತಿದೆ. ಸಂಪ್ರದಾಯಗಳು ಉಳಿದುಕೊಂಡಿವೆ ಎಂದರೆ ಹೆಣ್ಣು ಮಕ್ಕಳ ಕಾರಣದಿಂದ. ಆದರೆ ಇಂದಿನ ಜೀವನ ಪದ್ಧತಿಯಲ್ಲಿ ಹೆಣ್ಣು ಮಕ್ಕಳು ಹಣೆಗೆ ಕುಂಕುಮ ಹಚ್ಚುವುದನ್ನು ನಿಲ್ಲಿಸುತ್ತಿದ್ದಾರೆ. ಕುಂಕುಮ ಸೂರ್ಯನ ಪ್ರತೀಕ. ಕೆಟ್ಟ ದೃಷ್ಟಿಗಳನ್ನು ನಿಗ್ರಹಿಸುವ ಶಕ್ತಿಯನ್ನು ಕುಂಕುಮ ಹೊಂದಿದೆ. ಅದನ್ನು ಎಂದಿಗೂ ಅವಮಾನಿಸಬಾರದು ಎಂದರು.
ಗ್ರಾಪಂ ಅಧ್ಯಕ್ಷ ಜಗದೀಶ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಶೀಬಾಯಿ ರಾಂಪೂರ ಉಡಿ ತುಂಬುವದರ ಮೂಲಕ ಕಾರ್ಯಕ್ರಮ ಆರಂಭಿಸಿದರು. ವೀರಯ್ಯ ವಸ್ತ್ರದ, ಗ್ರಾಪಂ ಸದಸ್ಯ ಎಸ್.ಎನ್. ಕಂಬಳಿ, ಕಾಂಗ್ರೆಸ್ ಮುಖಂಡ ಸಿ.ಬಿ. ಅಸ್ಕಿ, ಮಾಜಿ ಸೈನಿಕ ನಾಗಲಿಂಗಯ್ಯ ಮಠ, ಪುರಸಭೆಯ ಮಾಜಿ ಸದಸ್ಯ ಬಸವರಾಜ ನಂದಿಕೇಶ್ವರಮಠ ಮಾತನಾಡಿದರು.
ಕುಂಟೋಜಿ ಬಸವೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ, ಬಸವರಾಜ ಹುಲಗಣ್ಣಿ, ಸಿದ್ದು ಹೆಬ್ಬಾಳ, ಜಿ.ಎಂ. ಹುಲಗಣ್ಣಿ, ಸೋಮಲಿಂಗಪ್ಪ ಗಸ್ತಿಗಾರ, ಸಂಗಣ್ಣ ಕುಂಬಾರ, ಸಂಗಯ್ಯ ಮಠ, ಗುರುಪಾದಪ್ಪ ಹೆಬ್ಬಾಳ, ಶಿವಣ್ಣ ಕೋಲಕಾರ ಇತರರಿದ್ದರು.