

ಹುಬ್ಬಳ್ಳಿ: ಹೆಣ್ಣು ಮಕ್ಕಳನ್ನು ರಕ್ಷಿಸಿ, ಹೆಣ್ಣು ಮಗುವಿನ ಮೇಲಾಗುತ್ತಿರುವ ದೌರ್ಜನ್ಯ ತಡೆಯಿರಿ ಎಂಬ ಸಂದೇಶದೊಂದಿಗೆ 35ಕ್ಕೂ ಹೆಚ್ಚು ಮಹಿಳೆಯರು ಭಾನುವಾರ ಸಂಜೆ ಧಾರವಾಡದಿಂದ ಹುಬ್ಬಳ್ಳಿಯವರೆಗೆ ಕಾರ್ ರ‍್ಯಾಲಿ ನಡೆಸಿದರು.
ಇನ್ನರ್ವ್ಹೀಲ್ ಕ್ಲಬ್ ಆಫ್ ಬ್ಲಿಂಗ್ ದಿ ಹುಬ್ಬಳ್ಳಿ ಮಿಡ್ಟೌನ್ ರ‍್ಯಾಲಿ ಆಯೋಜಿಸಿತ್ತು. ಕಾರ್ ಜತೆ ಜೀಪ್ ಮತ್ತು ದ್ವಿಚಕ್ರ ವಾಹನಗಳೊಂದಿಗೆ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ‘ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿ…ಹೆಣ್ಣು ಮಕ್ಕಳನ್ನು ರಕ್ಷಿಸಿ..ಅವಳಿಲ್ಲದೆ ಅವನಿಲ್ಲ…ನಮ್ಮ ಧ್ವನಿಯನ್ನು ಆಲಿಸಿ’ ಎಂಬಿತ್ಯಾದಿ ಸಂದೇಶಗಳನ್ನು ಕಾರ್ಗಳ ಮೇಲೆ ಬರೆಯಲಾಗಿತ್ತು.
ಧಾರವಾಡ ಜೆಎಸ್ಎಸ್ ಮೈದಾನದಿಂದ ಆರಂಭಗೊಂಡ ರ‍್ಯಾಲಿ ಹುಬ್ಬಳ್ಳಿ ವಿದ್ಯಾನಗರ ರಾಯ್ಕರ ಮೈದಾನದಲ್ಲಿ ಕೊನೆಗೊಂಡಿತು.
ರಾಯ್ಕರ್ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಇಂಟರ್ನ್ಯಾಶನಲ್ ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷೆ ಡಾ. ಬೀನಾ ವ್ಯಾಸ್ ಮಾತನಾಡಿ, ಇಂದಿನ ಮಹಿಳೆ ಸಾಹಸಿ, ಸೃಜನಶೀಲ ಎಂಬುದಕ್ಕೆ ಈ ಕಾರ್ ರ‍್ಯಾಲಿ ಸಾಕ್ಷಿಯಾಗಿದೆ. ನನಗೂ ಇದೊಂದು ಹೊಸ ಅನುಭವ ಎಂದು ಹೇಳಿದರು.
ಬಿಎನ್ಐ ಧಾರವಾಡ ಕಾರ್ಯಕಾರಿ ನಿರ್ದೇಶಕಿ ನಿಮಿಷಾ ಕಾಮತ್, ಒಟೀಲಿ ಅನ್ಬಕುಮಾರ್, ಅನ್ನಪೂರ್ಣ ಪಾಟೀಲ, ರತ್ನಾ ಬೆಹರೆ, ಇನ್ನರ್ವ್ಹೀಲ್ ಕ್ಲಬ್ ಡಿಸ್ಟ್ರಿಕ್ಟ್ 317 ಅಧ್ಯಕ್ಷೆ ಜ್ಯೋತಿ ಪಾಟೀಲ, ಇನ್ನರ್ವ್ಹೀಲ್ ಕ್ಲಬ್ ಆಫ್ ಬ್ಲಿಂಗ್ ದಿ ಹುಬ್ಬಳ್ಳಿ ಮಿಡ್ಟೌನ್ ಅಧ್ಯಕ್ಷೆ ಡಾ. ಕೇತ್ಕಿ ಕುಲಕರ್ಣಿ, ಕಲ್ಪನಾ ಕಾಮತ, ವೈಶಾಲಿ ಲೋಖಂಡೆ, ಮಹಾನಂದಾ ಚಂದರಗಿ, ಉತ್ಕರ್ಷಾ ಪಾಟೀಲ ಇತರರು ಇದ್ದರು.
ಅತ್ಯುತ್ತಮ ಅಲಂಕಾರಕ್ಕೆ ಡಾ. ಶೀತಲ ಕುಲಗೋಡ ಹಾಗೂ ಅಕ್ಷತಾ ಮತ್ತು ಪಲ್ಲವಿ ತಂಡ ಬಹುಮಾನ ಪಡೆಯಿತು. ಇದೇ ವೇಳೆ ನಗರದ ಸಿಟಿ ಹೈಸ್ಕೂಲ್ನ 8ನೇ ತರಗತಿಯ 7 ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಲಾಯಿತು.