ಚಾಮರಾಜನಗರ: ಕೌಶಲ್ಯಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ದಿ ಕೇಂದ್ರ (ಸಿಡಾಕ್), ಧಾರವಾಡ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಸಂಯುಕ್ತಾಶ್ರಯಾದಲ್ಲಿ ಜಿಲ್ಲೆಯಲ್ಲಿ ಸ್ವಂತ ಉದ್ಯಮವನ್ನು ಸ್ಥಾಪಿಸಲು ಬಯಸುವ ಪರಿಶಿಷ್ಟ ವರ್ಗದ (ಎಸ್.ಟಿ) ಆಸಕ್ತ ಮಹಿಳೆಯರಿಗಾಗಿ ಹತ್ತು ದಿನಗಳ ಉದ್ಯಮಶೀಲತಾ ಅಭಿವೃದ್ದಿ ತರಬೇತಿ ಕಾರ್ಯಕ್ರಮವನ್ನು ಜುಲೈ ತಿಂಗಳ ಕೊನೆಯ ವಾರದಲ್ಲಿ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಸ್ವಂತ ಉದ್ಯಮವನ್ನು ಸ್ಥಾಪಿಸಲು ಬಯಸುವ ಪರಿಶಿಷ್ಟ ವರ್ಗರ (ಎಸ್.ಟಿ) ಮಹಿಳೆಯರಿಗೆ ಉದ್ಯಮಶೀಲತಾ ಪ್ರೇರಣೆ, ಸ್ವಂತ ಉದ್ಯಮ ಸ್ಥಾಪನೆಗಾಗಿ ಸರ್ಕಾರ ಹಾಗೂ ಹಣಕಾಸು ಸಂಸ್ಥೆಗಳಿಂದ ದೊರೆಯುವ ನೆರವು/ ಪ್ರೋತ್ಸಾಹ, ಮಹಿಳಾ ಉದ್ಯಮದಾರರಿಗೆ ದೊರೆಯುವ ಸೌಲಭ್ಯಗಳು ಮಾರುಕಟ್ಟೆ ಮುಂತಾದ ವಿಷಯಗಳ ಹಾಗೂ ಇತರೆ ಕೈಗಾರಿಕಾ ವಿಷಯಗಳ ಕುರಿತು ತರಬೇತಿಯಲ್ಲಿ ಮಾಹಿತಿಯನ್ನು ನೀಡಲಾಗುವುದು.
ಅಭ್ಯರ್ಥಿಗಳು ಕನಿಷ್ಠ 21 ವಯಸ್ಸಿನವರಾಗಿರಬೇಕು, ಎಸ್.ಎಸ್.ಎಲ್.ಸಿ ತರಗತಿ ಉತ್ತೀರ್ಣರಾಗಿರಬೇಕು. ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೊಠಡಿ ಸಂಖ್ಯೆ 323 ಜಂಟಿ ನಿರ್ದೇಶಕರ ಕಚೇರಿ ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ ಇಲ್ಲಿ ಅರ್ಜಿ ಪಡೆದು ಜು. 26 ರೊಳಗೆ ಸಲ್ಲಿಸಬೇಕು.