

ಬಸವಕಲ್ಯಾಣ: ಶಿಕ್ಷಣದ ಜತೆಗೆ ಮಹಿಳೆಯರು ತಾಳ್ಮೆ ಮತ್ತು ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಅವಕಾಶಗಳನ್ನು ಉಪಯೋಗಿಸಿಕೊಂಡು ಎಲ್ಲ ಕ್ಷೇತ್ರಗಳಲ್ಲಿಯೂ ಮುಂದೆ ಬರಲು ಪ್ರಯತ್ನಿಸಬೇಕು ಎಂದು ಎಸ್‌ಬಿಆರ್ ಮುಖ್ಯಗುರು ಡಾ.ಜ್ಯೋತಿ ಮಣಗಿರೆ ಹೇಳಿದರು.
ನಗರದ ಶ್ರೀ ಶರಣಬಸವೇಶ್ವರ ರೆಸಿಡೆನ್ಸಿಯಲ್ ಸ್ಕೂಲ್‌ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕುಟುಂಬದ ಹಿತ ಕಾಪಾಡುವ ಜತೆಗೆ ಸಮಾಜ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಮಹಿಳೆ ಅಬಲೆಯಲ್ಲ. ಸಬಲೆಯಾಗಿದ್ದು, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಮನುಷ್ಯನ ನೆಮ್ಮದಿಯ, ಆರೋಗ್ಯಪೂರ್ಣ ಜೀವನಕ್ಕೆ ಬೇಕಿರುವ ಉತ್ತಮ ಪರಿಸರ ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಗಿಡಗಳನ್ನು ನೆಡುವ ಜತೆಗೆ ಅವುಗಳನ್ನು ಬೆಳೆಸುವಲ್ಲಿ ಕಾಳಜಿ ವಹಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಶಾಲಾ ಸಂಯೋಜಕಿ ಶಾಂತಮ್ಮ ಬಿರಾದಾರ, ಗೀತಾ ಅಡಕೆ, ಅಂಬಿಕಾ ಪುಂಡಲೀಕ ಇತರರಿದ್ದರು.