

ಹುಣಸೂರು: ಮಹಿಳೆಯರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತವರು ಮನೆಯಂತಾಗಿದ್ದು, ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಮೊದಲ ಮೆಟ್ಟಿಲಾಗಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ಎಚ್.ಎ.ಆದಿನಾರಾಯಣಶೆಟ್ಟಿ ಸಾಯಿ ಬ್ರಹ್ಮಗುರು ಕನ್ವೆನ್ಷ್‌ಹಾಲ್‌ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶನಿವಾರ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆಯಡಿ ಒಕ್ಕೂಟದ ಸದಸ್ಯರು ಪ್ರಸ್ತುತ ಸಾಲಿನಲ್ಲಿ 800 ಕೋಟಿ ರೂ.ಗಳ ವಹಿವಾಟು ನಡೆಸಿದ್ದಾರೆ. ಇದು ಅವರ ಆರ್ಥಿಕ ಶಕ್ತಿ, ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ರಾಜ್ಯದಲ್ಲಿ ಯೋಜನೆಯ ವತಿಯಿಂದ ಸ್ಥಾಪಿಸಿರುವ ಒಕ್ಕೂಟಗಳ ಸಂಖ್ಯೆ ಗಿನ್ನೆಸ್ ದಾಖಲೆಯ ಪುಟ ಸೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಿಳೆಯರಲ್ಲಿ ಆರ್ಥಿಕ ಶಿಸ್ತು, ಹಣದ ಮಹತ್ವ ಮತ್ತು ಸದ್ಬಳಕೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲಿಸಿಕೊಟ್ಟಿದೆ. ಮಹಿಳೆಯರಿಗೆ ತವರು ಮನೆಯ ಶಾಂತಿ, ನೆಮ್ಮದಿ ಮತ್ತು ಬೆಂಬಲವನ್ನು ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ದಾಖಲೆಯ ಸಾಧನೆ ಮಾಡಿದ್ದೇನೆ: ತಾಲೂಕಿನಲ್ಲಿ 15 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ಗುರುತಿಸುವಂತಹ ಕಾರ್ಯವನ್ನು ನಡೆಸಿದ್ದೇನೆ. ಅಂಗನವಾಡಿ ಕೇಂದ್ರದಿಂದ ಆರಂಭಗೊಂಡು ಪಿಎಚ್‌ಡಿ ಪಡೆಯುವ ತನಕ ಶಿಕ್ಷಣ ಕ್ಷೇತ್ರವನ್ನು ಬೆಳೆಸಿದ್ದೇನೆ. ತಾಲೂಕು ಮಟ್ಟದಲ್ಲಿ ರಾಜ್ಯದಲ್ಲೇ ಪ್ರಥಮ ಬೃಹತ್ ಆಸ್ಪತ್ರೆ ನಿರ್ಮಾಣ ನಮ್ಮ ಕ್ಷೇತ್ರದಲ್ಲಾಗುತ್ತಿದೆ ಎಂದರು.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನನ್ನ ವೈಯಕ್ತಿಕ ಆಸಕ್ತಿಯಿಂದ ಉಚಿತ ತರಬೇತಿ ಒದಗಿಸಲಾಗುತ್ತಿದೆ. ಜಿಟಿಟಿಸಿ(ಗೌರ‌್ನಮೆಂಟ್ ಟೂಲ್ ರೂಮ್ ಆ್ಯಂಡ್ ಟ್ರೇನಿಂಗ್ ಸೆಂಟರ್) ಮೂಲಕ 30 ಸಾವಿರ ಯುವಕರಿಗೆ ಉದ್ಯೋಗ ಸೃಷ್ಟಿಗೆ ಕ್ರಮ ವಹಿಸಿದ್ದೇನೆ. ತಾಲೂಕಿನ ಜನರು ಅದರಲ್ಲೂ ಮಹಿಳೆಯರು ಇದೆಲ್ಲವನ್ನೂ ಗಮನಿಸಿ ಮುಂದುವರಿಯಬೇಕು ಎಂದು ಕೋರಿದರು.
ಕಾರ್ಯಕ್ರಮದ ಅಂಗವಾಗಿ ರಂಗೋಲಿ ಸ್ಪರ್ಧೆ, ಪುಷ್ಪಗುಚ್ಛ ಸ್ಪರ್ಧೆ, ಪೌಷ್ಟಿಕ ಆಹಾರ ಮೇಳ, ಕರಕುಶಲ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿತ್ತು. ಇದೇ ವೇಳೆ ಸಾಧನೆಗೈದ ಒಕ್ಕೂಟದ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.
ನಗರಸಭೆ ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಸುನಿತಾ ಜಯರಾಮ್, ಪೌರಾಯುಕ್ತೆ ಎಂ.ಮಾನಸ, ಕಲ್ಕುಣಿಕೆ ಒಕ್ಕೂಟದ ಅಧ್ಯಕ್ಷೆ ಲಲಿತಾ, ಸಂಪನ್ಮೂಲ ವ್ಯಕ್ತಿಗಳಾದ ವಕೀಲೆ ಪವಿತ್ರಾ ಶ್ರೀಧರ್, ಸಂಚಾರಿ ಗಿರಿಜನ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಎಚ್.ಕೆ.ಸೌಮ್ಯಾ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಯೋಜನೆಯ ಜಿಲ್ಲಾ ನಿರ್ದೇಶಕ ಎಚ್.ಎಲ್.ಮುರಳೀಧರ್, ತಾಲೂಕು ಯೋಜನಾಧಿಕಾರಿ ಪಿ.ಕೆ.ರಮೇಶ್, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಹಾಗೂ ಒಕ್ಕೂಟದ ಸದಸ್ಯರು ಇದ್ದರು.