

ಹಿರೀಸಾವೆ: ಕಾನೂನು ಬಾಹಿರವಾಗಿ ವಿದ್ಯಾರ್ಥಿನಿಯರಿಗೆ ತೊಂದರೆಯಾದಾಗ ಆಯಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದರೆ ತಪ್ಪಿತಸ್ಥರ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಪ್ರಭಾಕರ್ ಹೇಳಿದರು.
ಇಲ್ಲಿನ ಎಸ್‌ಎನ್‌ಎಚ್‌ಸಿಎಸ್ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಪೋಕ್ಸೋ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲಕಿಯರ ಕಾಲೇಜು ಮತ್ತು ಪ್ರೌಢಶಾಲೆಗಳು ಪ್ರಮುಖ ರಸ್ತೆಯ ಪಕ್ಕದಲ್ಲೇ ಇವೆ. ಕೆಲವು ಯುವಕರು ಶಾಲೆ ಬಿಟ್ಟ ಸಮಯದಲ್ಲಿ ತೊಂದರೆ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಎಸ್‌ಐ ಎಸ್.ಎ.ಸುಪ್ರಿತ್ ಮಾತನಾಡಿ, ಬಸ್‌ನಲ್ಲಿ ಪ್ರಯಾಣ ಮಾಡುವಾಗ ಅಥವಾ ಬೇರೆ ಯಾವುದೇ ಸಂದರ್ಭದಲ್ಲಿ ಪರಿಚಿತ ಹಾಗೂ ಅಪರಿಚಿತ ವ್ಯಕ್ತಿಗಳು ನಿಮ್ಮೊಂದಿಗೆ ಅನುಚಿತವಾಗಿ ವರ್ತನೆ ಮಾಡಿದರೆ ತಕ್ಷಣ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದಲ್ಲಿ ತಕ್ಷಣ ಪೊಲೀಸರು ಸ್ಪಂದಿಸುತ್ತಾರೆ ಎಂದು ತಿಳಿಸಿದರು.
ಸಾಮಾಜಿಕ ಜಾಲಾತಾಣಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಮಕ್ಕಳ ಕೈಗೆ ಮೊಬೈಲ್ ಕೊಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ನಿಯಂತ್ರಿಸಬಹುದು. ರಸ್ತೆ ನಿಯಮಗಳನ್ನು ಪಾಲನೆ ಮಾಡಿ. ಬೆಲೆ ಬಾಳುವ ವಸ್ತುಗಳನ್ನು ಮನೆಯಲ್ಲಿ ಇಡದಂತೆ ಮನೆಯವರಿಗೆ ತಿಳಿಹೇಳಿ ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಲೋಕೇಶ್, ಮುಖ್ಯಶಿಕ್ಷಕಿ ವರಲಕ್ಷ್ಮೀ ಮತ್ತು ಉಪನ್ಯಾಸಕರು, ಶಿಕ್ಷಕರು ಇದ್ದರು. ಕಾಲೇಜು ಮತ್ತು ಪ್ರೌಢಶಾಲೆಯ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.