

ಹುಬ್ಬಳ್ಳಿ: ಹೆಣ್ಣು ಮಕ್ಕಳನ್ನು ಸಮಾಜದ ಮುನ್ನೆಲೆಗೆ ತರುವ ಉದ್ದೇಶದಿಂದ ರಾಜ್ಯ ಪ್ರವಾಸ ಕೈಗೊಂಡಿದ್ದೇನೆ ಎಂದು ರಾಜ್ಯ ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಅರುಣಾದೇವಿ ಉದಯಕುಮಾರ್ ತಿಳಿಸಿದರು.
ಇಲ್ಲಿಯ ಮೂರುಸಾವಿರ ಮಠಕ್ಕೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮಹಾಸಭಾ ಜವಾಬ್ದಾರಿ ವಹಿಸಿಕೊಂಡ ನಂತರ ಇದು ಮೊದಲ ಪ್ರವಾಸ. ಸಮಾಜದ ಸಂಘಟನೆಯಲ್ಲಿ ಮಹಿಳೆಯರು ಹೆಚ್ಚು ಭಾಗಿಯಾಗುವಂತೆ ಪ್ರೇರೇಪಿಸುತ್ತಿದ್ದೇನೆ. ಯಾವುದೇ ಸಮುದಾಯದ ಬಡ ಹೆಣ್ಣು ಮಕ್ಕಳಿದ್ದರೂ ಅವರಿಗೆ ಉತ್ತಮ ಶಿಕ್ಷಣ, ಅವಕಾಶ ಸಿಗಬೇಕು. ಉತ್ತರ ಕರ್ನಾಟಕ ಸೇರಿ ವಿವಿಧೆಡೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ಆರಂಭಿಸಲು ಯೋಜಿಸಲಾಗಿದೆೆ ಎಂದರು.
ನಿಗಮ ಹಾಗೂ ಮೀಸಲಾತಿ ಹೆಚ್ಚಳ ವಿಷಯವಾಗಿ ನಾನು ಹೆಚ್ಚು ಹೇಳುವುದಿಲ್ಲ. ಶಾಮನೂರು ಶಿವಶಂಕರಪ್ಪ ಅವರಂಥ ಅನೇಕ ಹಿರಿಯರು ಇದ್ದಾರೆ. ಅವರು ನೋಡಿಕೊಳ್ಳುತ್ತಾರೆ. ಮಹಾಸಭಾಕ್ಕೆ ದಾನಿಗಳು ನೀಡಿದ್ದು ಸದ್ಬಳಕೆಯಾಗಬೇಕು. ಧರ್ಮ ಉಳಿಯಬೇಕು, ಬಸವ ತತ್ವ ಎಲ್ಲರನ್ನೂ ತಲುಪಬೇಕು. ಅದಕ್ಕಾಗಿ ನಮ್ಮ ಪ್ರಯತ್ನ ಎಂದು ಪ್ರಶ್ನೆಗಳಿಗೆ ಉತ್ತರಿಸಿದರು.
ಸ್ವಾಮೀಜಿ ಆಶೀರ್ವಾದ:
ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳನ್ನು ಅರುಣಾದೇವಿ ಭೇಟಿಯಾಗಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ‘ಬಿ.ಎಸ್. ಯಡಿಯೂರಪ್ಪ ಅವರು ರಾಜಕೀಯದ ಆದರ್ಶ ವ್ಯಕ್ತಿ. ಅವರ ಸಾಮಾಜಿಕ ಕಳಕಳಿ ಅಪಾರವಾದದ್ದು. ಎಲ್ಲ ಸಮಾಜದವರಿಗೂ ಅವರು ಬೇಕು. ಯಡಿಯೂರಪ್ಪ ಅವರ ಕುಟುಂಬದವರೆಲ್ಲ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ’ ಎಂದರು.
ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಮೈಲಾರ ಉಪ್ಪಿನ, ರಾಜ್ಯ ಕಾರ್ಯದರ್ಶಿ ದೇವರಾಜ ದಾಡಿಬಾವಿ, ಜಿಲ್ಲಾ ಉಪಾಧ್ಯಕ್ಷ ರವಿ ದಾಸನೂರ, ಕಾರ್ಯದರ್ಶಿ ಮಂಜುನಾಥ ಹೆಬಸೂರ, ಪೂರ್ವ ಕ್ಷೇತ್ರದ ಅಧ್ಯಕ್ಷ ಹರೀಶ ಹಳ್ಳಿಕೇರಿ, ಪವನ ಹಳ್ಯಾಳ, ಶಂಕರಗೌಡ ಪಾಟೀಲ, ಪ್ರವೀಣ ಯರಗಟ್ಟಿ, ಸದಾನಂದ ಡಂಗನವರ ಮುಂತಾದವರು ಉಪಸ್ಥಿತರಿದ್ದರು.
ಬಿಎಸ್ವೈ ಪೂರ್ಣ ಅವಧಿ ಸಿಎಂ
ಧಾರವಾಡ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅತ್ಯಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಪೂರ್ಣ ಅವಧಿಗೆ ಅವರೇ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಅರುಣಾದೇವಿ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾನು ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಕಾರಣಕ್ಕೆ ವೀರಶೈವ ಮಹಾಸಭಾದ ಹುದ್ದೆ ನೀಡಿದ್ದಾರೆ. ನನಗೆ ನೀಡಿರುವುದು ಜವಾಬ್ದಾರಿ ಹೊರತು ಅಧಿಕಾರವಲ್ಲ ಎಂದು ತಿಳಿದುಕೊಂಡು ಸಮಾಜದ ಏಳ್ಗೆಗೆ ಶ್ರಮಿಸುತ್ತೇನೆ. ಈಗಾಗಲೇ ಸಮಾಜದ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಕೆಲಸ ನಡೆದಿದೆ. ಧಾರವಾಡದಲ್ಲಿ ನಿರ್ವಿುಸಿರುವ ಲಿಂಗಾಯತ ಭವನ ಮಾದರಿಯಾಗಿದೆ ಎಂದರು.
ಜಿಲ್ಲಾ ಘಟಕದ ಪದಾಧಿಕಾರಿಗಳಾದ ಗುರುರಾಜ ಹುಣಸಿಮರದ, ಶಿವಾನಂದ ಅಂಬಡಗಟ್ಟಿ, ಶಿವಶರಣ ಕಲಬಶೆಟ್ಟರ, ಎಂ.ಎಫ್. ಹಿರೇಮಠ, ಮಹಿಳಾ ಘಟಕದ ಪದಾಧಿಕಾರಿಗಳು, ಇತರರು ಇದ್ದರು.
EndFragment