ಮಹಿಳೆಯರ ಬಸ್ ಉಚಿತ ಪ್ರಯಾಣಕ್ಕೆ ಮೈಸೂರಿನಲ್ಲೂ ಚಾಲನೆ

9
Published on

ಮೈಸೂರು:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮಹಿಳೆಯರಿಗೆ ಬಸ್ ಉಚಿತ ಪ್ರಯಾಣ ಸೌಲಭ್ಯ ನೀಡುವ ‘ಶಕ್ತಿ ಯೋಜನೆ’ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಾಲನೆ ನೀಡಿದರು.
ನಗರದ ಕೇಂದ್ರೀಯ ನಿಲ್ದಾಣ (ಸಬ್ ಅರ್ಬನ್)ದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಸ್‌ನಲ್ಲಿದ್ದ ಮಹಿಳೆಯರಿಗೆ ಉಚಿತ ಟಿಕೆಟ್ ವಿತರಿಸಿದರು. ಅಲ್ಲದೆ ಪ್ರಯಾಣ ಮಾಡಲು ಬಂದ ಮಹಿಳೆಯರಿಗೆ ಗುಲಾಬಿ ಹೂ ನೀಡಿ, ಸಿಹಿ ವಿತರಿಸಿದರು.
ಬಳಿಕ ಮಾತನಾಡಿದ ಡಾ.ಎಚ್.ಸಿ.ಮಹದೇವಪ್ಪ ಅವರು, ಮಹಿಳಾ ಸಬಲೀಕರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒತ್ತು ನೀಡಲಿದ್ದು, ನುಡಿದಂತೆ ನಡೆದು ಐತಿಹಾಸಿಕ ತೀರ್ಮಾನ ಮಾಡಲಾಗಿದೆ. ಬೆಂಗಳೂರಿನಲ್ಲಿ ರಾಜ್ಯಕ್ಕೆ ಅನ್ವಯವಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂದೆ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದು, ಜಿಲ್ಲಾಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಏಕಕಾಲಕ್ಕೆ ಚಾಲನೆ ನೀಡಿದ್ದಾರೆ ಎಂದು ಹೇಳಿದರು.
ಐದು ಗ್ಯಾರಂಟಿಗಳ ಮೂಲಕ ಪ್ರತಿಯೊಬ್ಬರಿಗೂ ಅನುಕೂಲವಾಗುವಂತೆ ಕಾರ್ಯಕ್ರಮ ನೀಡಲಾಗಿದೆ. ಸ್ತ್ರೀಯರ ಸಬಲೀಕರಣಕ್ಕಾಗಿ ರಚನೆಯಾಗಿರುವ ಕಾರ್ಯಕ್ರಮಗಳಲ್ಲಿ ಶಕ್ತಿ ಯೋಜನೆಯು ಮಹಿಳೆಯರಿಗೆ ಉಚಿತ ಪ್ರಯಾಣ ಕಾರ್ಯಕ್ರಮವು ಪ್ರಮುಖವಾಗಿದ್ದು ಇದರಿಂದ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗಿದೆ.
ಶುದ್ಧ ಕುಡಿಯುವ ನೀರು, ಸಾರಿಗೆ, ವಸತಿಹೀನರಿಗೆ ವಸತಿ, ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯದ ಕ್ರಮಗಳನ್ನು ಕೊಡುವ ಮೂಲಕ ಗೌರವ ತಂದು ಕೊಡುವ ಕೆಲಸ ಮಾಡುವುದು ನಮ್ಮ ಸರ್ಕಾರದ ಆದ್ಯ ಹೊಣೆಯಾಗಿದೆ. ಬುದ್ದ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಜನಪರವಾಗಿ ನಮ್ಮ ಸರ್ಕಾರ ಹೆಜ್ಜೆ ಇಡಲಿದೆ ಎಂದು ಹೇಳಿದರು.
ಶಕ್ತಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಪ್ರತಿನಿತ್ಯ 40 ಲಕ್ಷಕ್ಕೂ ಅಧಿಕ ಮಹಿಳೆಯರು ಪ್ರಯಾಣ ಮಾಡುವರು. ಇದರಿಂದ ಸರ್ಕಾರಕ್ಕೆ ವರ್ಷಕ್ಕೆ 4050 ಕೋಟಿ ರೂ. ವೆಚ್ಚವಾಗಲಿದ್ದು, ಅದನ್ನು ಭರಿಸಲಾಗುವುದು. ಪ್ರತಿ ಮಹಿಳೆಯರು ಕೂಡ ಸ್ವಾವಲಂಬಿಯಾಗಿ ಜೀವನ ಮಾಡಲು ನಮ್ಮ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಮಾಡಲಿದೆ ಎಂದು ತಿಳಿಸಿದರು.
ಸರ್ಕಾರದ ಈ ಯೋಜನೆಯಿಂದ ಉದ್ಯೋಗಿಗಳು, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವವರು ಕೂಲಿ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ದೇಶದಲ್ಲೇ ಯಾವುದೇ ಸರ್ಕಾರಗಳು ಇಂತಹ ಜನಪರ ಕಾರ್ಯಕ್ರಮವನ್ನು ತಂದಿಲ್ಲ. ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎನ್ನುವ ಕಾರಣಕ್ಕೆ ಅನಗತ್ಯವಾಗಿ ಓಡಾಟ ಮಾಡುವುದು ಸರಿಯಲ್ಲ ಎಂದರು.
ಅನ್ನಭಾಗ್ಯ ಯೋಜನೆಗೆ ಮೈಸೂರಿನಿಂದಲೇ ಚಾಲನೆ ನೀಡಲು ಉದ್ದೇಶಿಸಲಾಗಿದೆ. ಉಳಿದ ಯೋಜನೆಗಳನ್ನು ಬೇರೆ, ಬೇರೆ ಕಡೆಗಳಲ್ಲಿ ಚಾಲನೆ ನೀಡಲಾಗುವುದು. ಗೃಹಶಕ್ತಿ ಯೋಜನೆಯಡಿ ಪ್ರತಿ ಮನೆಯ ಒಡತಿಗೆ ಎರಡು ಸಾವಿರ ರೂ. ಪ್ರೋತ್ಸಾಹಧನ ನೀಡಿದರೆ ತುಂಬ ನೆರವಾಗಲಿದೆ. ನಿರುದ್ಯೋಗಿ ಪದವೀಧರರಿಗೂ ಸರ್ಕಾರ ಪ್ರತಿ ತಿಂಗಳು ಗೌರವಧನ ಕೊಡುವ ಕಾರಣ ಕೆಲಸ ಹುಡುಕಲು ಮತ್ತು ಬೇರೆ ಏನಾದರೂ ವೃತ್ತಿ ಅವಲಂಬನೆ ಮಾಡುವ ತನಕ ಸಹಾಯವಾಗಲಿದೆ ಎಂದರು.
ಶಾಸಕ ಕೆ.ಹರೀಶ್‌ಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಸಕ ತನ್ವೀರ್‌ಸೇಠ್, ವಿಧಾನ ಪರಿಷತ್ತಿನ ಸದಸ್ಯರಾದ ಮರಿತಿಬ್ಬೇಗೌಡ, ಎ.ಎಚ್.ವಿಶ್ವನಾಥ್, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ, ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮರೀಗೌಡ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net