

ನೆಲಮಂಗಲ: ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ವೀರಶೈವ ಮಹಾಸಭಾದ ಕಾರ್ಯ ಶ್ಲಾಘನೀಯ ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಗಾರ್ಡನ್ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಮಹಿಳಾ ಘಟಕ ಉದ್ಘಾಟನೆ ಹಾಗೂ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ಸಮಾಜದ ಬೆಳವಣಿಗೆ ಮಹಿಳೆಯ ಕೊಡುಗೆ ಅಪಾರ. ಮಹಿಳೆಯರು ಹೆಚ್ಚು ಜಾಗೃತರಾಗಬೇಕಿದೆ. ಮಠಗಳಿಂದ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಲಾಗಿದೆ. ಗ್ರಾಮಾಂತರ ಜಿಲ್ಲೆಯ 4 ತಾಲೂಕಿನ ಪೈಕಿ ನೆಲಮಂಗಲದಲ್ಲಿ ಅತಿಹೆಚ್ಚು ಮಠಗಳಿವೆ. ಆದರೆ ಸಮುದಾಯದ ಜನರು ಮಠವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರಿಸಿದರು.
ಮುಂದಿನ ದಿನಗಳಲ್ಲಿ ಶರಣರ ಭಾವಚಿತ್ರ ಮತ್ತು ವಚನ ಪುಸ್ತಕ ವಿತರಿಸುವ ಮೂಲಕ ಅವರ ಕೊಡುಗೆಯನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಮಾಡಬೇಕಿದೆ. ಹಾಗೆಯೇ ಜಿಲ್ಲಾ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳು ಅಧಿಕಾರ ಎಂದು ಭಾವಿಸದೆ ಸೇವೆ ಎಂದು ಭಾವಿಸಿ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದರು.
ಮಹಿಳಾ ಘಟಕ ರಾಷ್ಟ್ರೀಯ ಅಧ್ಯಕ್ಷೆ ಮಧುರಾ ಅಶೋಕ್ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಕಾಯಕ ನಿಷ್ಠೆ, ನಿಯಮ ಮತ್ತು ಪ್ರಾಮಾಣಿಕತೆ ಇರಬೇಕು. ಸಮಾಜದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನ ನೀಡಿದ್ದು, ಬಸವಣ್ಣ ಅವರ ತತ್ವಾದರ್ಶ ಅನುಸರಿಸಿ ಉತ್ತಮ ಸಮಾಜ ಕಟ್ಟೋಣ ಎಂದರು.
ಲಕ್ಷಾಂತರ ಮಂದಿ ವೀರಶೈವ ಮಹಾಸಭಾದಲ್ಲಿ ಸದಸ್ಯತ್ವ ಪಡೆದುಕೊಂಡು ಸಮುದಾಯ ಏಳಿಗೆಗೆ ಶ್ರಮಿಸುತ್ತಿದ್ದು, ಸಮುದಾಯ ಬಲಪಡಿಸಲು ಎಲ್ಲರೂ ಸಹಕಾರ ನೀಡಬೇಕು ಎಂದರು.
ಸಂಸ್ಕಾರವಂತರಾಗಿರುವ ವೀರಶೈವ ಲಿಂಗಾಯತರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಸಂಘಟನೆ, ಸಮಾಜದ ಬಲವರ್ಧನೆಗೆ ಜತೆಗೆ ಪರಿವರ್ತನೆಗೂ ಸಹಕಾರಿಯಾಗಲಿದೆ ಎಂದು ಮಾಜಿ ಶಾಸಕ ಎಂ.ವಿ.ನಾಗರಾಜು ತಿಳಿಸಿದರು.
ನೂತನ ಪದಾಧಿಕಾರಿಗಳು: ಗ್ರಾಮಾಂತರ ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ರಾಜಮ್ಮಪ್ರಕಾಶ್, ಉಪಾಧ್ಯಕ್ಷೆಯಾಗಿ ನೀಲಮ್ಮ, ಪ್ರಧಾನ ಕಾರ್ಯದರ್ಶಿಯಾಗಿ ಪೂರ್ಣಿಮಾಸುಗ್ಗರಾಜು, ಕಾರ್ಯದರ್ಶಿಯಾಗಿ ರುದ್ರಾಣಮ್ಮ, ನಿರ್ದೇಶಕಿಯಾಗಿ ಎಂ.ಎಸ್.ಮಂಜುಳಾಸುರೇಶ್, ಶೀಲಾಶಿವಶಂಕರ್, ಎಂ.ಎಸ್.ಗೀತಾರಾಧಾ ಉಮೇಶ್, ಭಾಗ್ಯಾ ಆಯ್ಕೆಯಾದರು. ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಸಾಧಕಿಯನ್ನು ಸನ್ಮಾನಿಸಲಾಯಿತು. ಶ್ರೀಣಿಶಿವಶಂಕರ್ ಅವರಿಂದ ಭರತನಾಟ್ಯ ಹಮ್ಮಿಕೊಳ್ಳಲಾಗಿತ್ತು.
ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಸ್.ಮಲ್ಲಯ್ಯ, ಬಿಎಂಟಿಸಿ ನಿರ್ದೇಶಕ ಕೆ.ಪಿ.ಬೃಂಗೇಶ್, ಗ್ರಾಪಂ ಸದಸ್ಯೆ ಅನಸೂಯಾ ಮಲ್ಲಯ್ಯ, ಜಗದಾಂಭಾ ಪುಟ್ಟಸ್ವಾಮಿ, ತಾಲೂಕು ಅಧ್ಯಕ್ಷೆ ವೇದಾವತಿ ಮತ್ತಿತರರು ಉಪಸ್ಥಿತರಿದ್ದರು.