ಮಹಿಳೆಯರ ಉಚಿತ ಪ್ರಯಾಣ ‘ಶಕ್ತಿ’ ಜಾರಿಗೆ ಮೈಸೂರಿನಲ್ಲೂ ಸಿದ್ಧತೆ

KSRTC BUS
KSRTC BUS
Published on

ಮೈಸೂರು: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ’ ಯೋಜನೆ ಜಾರಿಗೆ ನಗರದಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಚಾಲಕ, ನಿರ್ವಾಹಕ ಸೇರಿದಂತೆ ವಿವಿಧ ಸಿಬ್ಬಂದಿಗೂ ವಿಶೇಷ ತರಬೇತಿ ನೀಡಲಾಗುತ್ತಿದೆ.

ಜೂ. 11ರಂದು ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಚಾಲನೆ ನೀಡಲಿದ್ದಾರೆ. ಈ ನಡುವೆ, ಆಯಾ ಜಿಲ್ಲಾ ಕೇಂದ್ರಗಳಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ ಕಾರ್ಯಕ್ರಮ ಆಯೋಜಿಸಲು ಕೇಂದ್ರ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ. ಇದರ ಬೆನ್ನಲ್ಲೇ ಕಾರ್ಯಕ್ರಮ ಹಮ್ಮಿಕೊಳ್ಳಲು ಮೈಸೂರಿನಲ್ಲಿ ತಯಾರಿ ಶುರು ಮಾಡಿಕೊಳ್ಳಲಾಗಿದೆ.

ಮೈಸೂರಿನ ನಗರ ಬಸ್ ನಿಲ್ದಾಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, ಅದಕ್ಕಾಗಿ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಶಿಷ್ಟಾಚಾರದ ಪ್ರಕಾರ ಜಿಲ್ಲೆಯ ಎಲ್ಲ ಪ್ರತಿನಿಧಿಗಳು, ಜಿಲ್ಲೆಯ ಇಬ್ಬರಿಗೂ ಆಹ್ವಾನಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ಅಧಿಕಾರಿ ಮರೀಗೌಡ ತಿಳಿಸಿದರು.

ಬಸ್‌ನಲ್ಲಿ ಇಟಿಎಂ ಟಿಕೆಟ್‌ಮಷಿನ್ ಯಾವ ರೀತಿ ಬಳಸಬೇಕು, ಮಹಿಳೆಯರ ಜತೆ ಹೇಗೆ ಸೌಜನ್ಯವಾಗಿ ನಡೆದುಕೊಳ್ಳಬೇಕು, ಯಾವುದೇ ಗೊಂದಲಗಳಿಗೆ ಎಡೆಮಾಡಿಕೊಳ್ಳಬಾರದು ಎಂಬ ಸೂಚನೆಯನ್ನು ಈಗಾಗಲೇ ಎಲ್ಲ ಸಿಬ್ಬಂದಿಗೂ ನೀಡಲಾಗಿದೆ. ಚಾಲಕ, ನಿರ್ವಾಹಕರಿಗೆ ನಿತ್ಯ ಸಿಗುತ್ತಿದ್ದ ಇನ್ಸೆಂಟಿವ್‌ಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net