

ಹುಮನಾಬಾದ್: ಸುಮಾರು ದಶಕಗಳಿಂದ ಮಹಿಳೆಯರು ಎಲ್ಲ ರಂಗಗಳಲ್ಲಿ ಸಾಮರ್ಥ್ಯ ಹೊಂದಲು ಜನವಾದಿ ಮಹಿಳಾ ಸಂಘಟನೆ ಶ್ರಮಿಸುತ್ತಿದ್ದು, ಸಂಘಟನೆ ಮತ್ತಷ್ಟು ಬಲಪಡಿಸಲು ಮುಂದಾಗಬೇಕೆAದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ ಕರೆ ನೀಡಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ೧೧ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸಂಘಟನೆ ಆರಂಭದಿಂದ ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರ ವಿರುದ್ಧ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಸಂಘಟನೆ ಮಹಿಳೆಯರ ಪರ ಧ್ವನಿಯಾಗಿ ಕಾರ್ಯ ಮಾಡುತ್ತಿದೆ. ದೇಶದಲ್ಲಿ ಅತೀ ದೊಡ್ಡ ಮಹಿಳಾ ಸಂಘ ಸಂಘಟನೆಯಾಗಿದ್ದು, ಸುಮಾರು ೧.೨೦ ಕೋಟಿಗೂ ಹೆಚ್ಚು ಮಹಿಳಾ ಸದಸ್ಯರನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಎಲ್ಲ ಬಗೆಯ ಶೋಷಣೆಗಳು ನಡೆಯುತ್ತಿದ್ದು ಮಹಿಳೆಯರು ಎಚ್ಚತ್ತುಕೊಳ್ಳಬೇಕು ಎಂದು ಹೇಳಿದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಮಾತನಾಡಿ, ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಿರುವುದು ಸಂಘಟನೆ ಖಂಡಿಸುತ್ತದೆ. ಕೋಮು ಸಾಮರಸ್ಯ, ಜನಾಂಗೀಯ ನಿಂದನೆ, ಧಾರ್ಮಿಕ ಅಸಹನೆ ಹುಟ್ಟು ಹಾಕಲಾಗುತ್ತಿದೆ. ಇದರಿಂದ ಎಲ್ಲ ಧರ್ಮಗಳ ಮಹಿಳೆಯರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿ ಜನಾಂಗೀಯ ದ್ವೇಷ ಹರಡದಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ಸಂಘಟನೆಯ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮಿ ಗಡ್ಡೆ, ಹುಮನಾಬಾದ್ ಪುರಸಭೆ ಸಮುದಾಯದ ಸಂಘಟನಾಧಿಕಾರಿ ಮೀನಾಕುಮಾರಿ ಬೋರಾಳಕರ, ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ರೇಷ್ಮಾ ಹಂಸರಾಜ, ಸಿಐಟಿಯು ಜಿಲ್ಲಾ ಸಂಚಾಲಕಿ ಶ್ರೀದೇವಿ ಚಿವುಡೆ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ರೇಖಾ ಹಮೀಲಪುರಕರ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಜಯಶ್ರೀ ಮೆಂಡೋಳೆ, ಶಿಲಾ ರಡ್ಡಿ, ಸುನೀತಾ ಭೋಲಾ, ಮಹೇಶ್ವರಿ ಪೋಚಂಪಳ್ಳಿ ಇತರರಿದ್ದರು. ಆರಂಭದಲ್ಲಿ ಪ್ರವಾಸಿ ಮಂದಿರದಿಂದ ನೌಕರರ ಭವನದವರೆಗೆ ಮೆರವಣಿಗೆ ನಡೆಯಿತು.