ಮಹಿಳೆಗೆ ಶೋಷಣೆಯಿಂದ ಮುಕ್ತಿ ದೊರೆತಿಲ್ಲ

21
Published on

ಮೈಸೂರು: ಆಧುನಿಕ ಯುಗದಲ್ಲೂ ಮಹಿಳೆಗೆ ಶೋಷಣೆ ತಪ್ಪಿಲ್ಲ ಎಂದು ಮೇಯರ್ ಶಿವಕುಮಾರ್ ಕಳವಳ ವ್ಯಕ್ತಪಡಿಸಿದರು.


ಪದ್ಮಶ್ರೀ ಜೈನ ಮಹಿಳಾ ಸಮಾಜದ ವತಿಯಿಂದ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.


ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಆದರೂ ಶೋಷಣೆಯಿಂದ ಮುಕ್ತಿ ದೊರೆಯುತ್ತಿಲ್ಲ. ನಗರ ಪ್ರದೇಶದಲ್ಲಿ ಕೊಂಚ ಸುಧಾರಣೆ ಕಾಣುತ್ತಿದೆ. ಗ್ರಾಮಾಂತರ ಪ್ರದೇಶದ ಮಹಿಳೆಯರ ಸ್ಥಿತಿಗತಿ ಇನ್ನೂ ಬದಲಾಗಿಲ್ಲ. ಸಂಸಾರದ ಬಂಧನದಿಂದ ಹೊರಬರಲು ಅವಳಿಗೆ ಇಂದಿಗೂ ಸಾಧ್ಯವಾಗುತ್ತಿಲ್ಲ. ಅಂಗಡಿಗೆ ಹೋಗಿ ಸಾಮಗ್ರಿ ತರಲು ಸಹ ಸ್ವಾತಂತ್ರೃವಿಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಮಹಿಳೆಯರಿಗೆ ಅರಿವು ಮೂಡಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಹಿಳಾ ಸಂಘಟನೆಗಳು ಮಾಡಬೇಕು ಎಂದರು.


ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಇದೆ. ಇದರಿಂದ ಮೈಸೂರು ಮಹಾನಗರ ಪಾಲಿಕೆಯಲ್ಲಿ 65 ಸದಸ್ಯರಲ್ಲಿ 36 ಮಹಿಳೆಯರು ಸದಸ್ಯರಾಗಲು ಸಾಧ್ಯವಾಗಿದೆ. ಅವರು ಮನಸ್ಸು ಮಾಡಿದರೆ ಪುರುಷರನ್ನು ಮೀರಿ ತೀರ್ಮಾನ ಮಾಡಬಹುದಾಗಿದೆ ಎಂದರು.


ವಿಧಾನಸಭೆ, ಲೋಕಸಭೆಯಲ್ಲೂ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ದೊರೆಯಬೇಕು. ದೇಶ ಆಳುವ ನಿಟ್ಟಿನಲ್ಲಿ ಮಹಿಳೆಯರು ಬರಬೇಕು. ರಾಜ್ಯದಲ್ಲಿ ಮಹಿಳಾ ಸಿಎಂ ಆಗಬೇಕು ಎಂದರು.


ಕವಯಿತ್ರಿ ಡಾ.ಲತಾ ರಾಜಶೇಖರ್, ವಕೀಲೆ ನಾಗಶ್ರೀ ಮುಪ್ಪಾನೆ, ಮಹಿಳಾ ಉದ್ದಿಮಿ ಛಾಯ ನಂಜಪ್ಪ, ಮಹಿಳಾ ಸಮಾಜದ ಅಧ್ಯಕ್ಷೆ ಲತಾ ಸುದರ್ಶನ್ ಇನ್ನಿತರರು ಇದ್ದರು.


ಬಳಿಕ ಕುಮಾರಿ ನಿಸರ್ಗಾ ಮತ್ತು ವಿಸ್ಮಯ ಅವಳಿ ಸಹೋದರಿಯರಿಂದ ಭಾವಗೀತೆಗಳ ಸುಮಧುರಗಾಯನ ನಡೆಯಿತು. ಮಹಿಳಾ ಸಮಾಜದ ಸದಸ್ಯರಿಂದ ವಿವಿಧ ನೃತ್ಯ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net