ಮಹಿಳೆ ಮೇಲೆ ನೀರು ಮಿಶ್ರಿತ ಆ್ಯಸಿಡ್ ಎರೆಚಿದ ಪ್ರಿಯಕರ

e79c1da0-f986-413f-ac64-ffdd273417e4
Published on

ಬಾಗಲಕೋಟೆ: ರಾಜ್ಯದಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಸಿಗುತ್ತಿಲ್ಲ ಎನ್ನುವ ಕೂಗು ಬಲವಾಗಿ ಕೇಳಿ ಬರುತ್ತಿರುವ ಬೆನ್ನಲ್ಲೆ ಇದೀಗ ಬಾಗಲಕೋಟೆಯಲ್ಲೂ ಮಹಿಳೆಯೊಬ್ಬರ ಮೇಲೆ ನೀರು ಮಿಶ್ರಿತ ಆ್ಯಸಿಡ್ ದಾಳಿ ನಡೆದಿದೆ.

ಮನೆಯ ಬಾಗಿಲು ತೆರೆಯಲಿಲ್ಲ ಎನ್ನುವ ಆಕ್ರೋಶದಿಂದ ಪ್ರಿಯಕರನು ಮನೆಯ ಕಿಟಕಿಯಿಂದಲೇ ಮಹಿಳೆಯ ಮೇಲೆ ನೀರು ಮಿಶ್ರಿತ ಆ್ಯಸಿಡ್ ಎರೆಚಿರುವ ಘಟನೆ ಬಾಗಲಕೋಟೆ ಸಮೀಪದ ಗದ್ದನಕೇರಿ ಕ್ರಾಸ್ ನಲ್ಲಿ ಸೋಮವಾರ ರಾತ್ರಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಲಕ್ಷ್ಮೀ ಬಡಿಗೇರ ಎನ್ನುವ ಮಹಿಳೆಯ ಮೇಲೆ ಆಕೆಯ ಪ್ರಿಯಕರ ಎನ್ನಲಾದ ಮೌನೇಶ್ ಪತ್ತಾರ ಎನ್ನುವವ ಆ್ಯಸಿಡ್ ಎರೆಚಿದ್ದಾನೆ.

ನೀರು ಮಿಶ್ರಿತ ಆ್ಯಸಿಡ್ ಇದಾಗಿದ್ದರಿಂದ ಪ್ರಾಣಾಪಾಯದಿಂದ ಮಹಿಳೆ ಪಾರಾಗಿದ್ದಾರೆ. ಎಡಗಣ್ಣು ಹಾಗೂ ಮುಖ, ಹೊಟ್ಟೆ ಭಾಗದಲ್ಲಿ ಗಾಯಗಳಾಗಿವೆ. ಮಹಿಳೆಗೆ ಎರೆಚಿದ ಆ್ಯಸಿಡ್ ಆಕೆಯ ಎಂಟು ವರ್ಷದ ಮಗಳಿಗೂ ಚಿಮುಕಿದೆ. ಆದರೆ, ಬಾಲಕಿಗೆ ಯಾವುದೇ ಗಾಯ ಆಗಿಲ್ಲ.

ಲಕ್ಷ್ಮೀ ಅವರಿಗೆ ಬಾಗಲಕೋಟೆ ನವನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ ಎನ್ನಲಾಗುತ್ತಿದೆ.

ಆ್ಯಸಿಡ್ ಎರೆಚಿ ಪರಾರಿಯಾಗಿದ್ದ ಆರೋಪಿ ಮೌನೇಶ್ ಪತ್ತಾರನನ್ನು ಮಂಗಳವಾರ ವಿಜಯಪುರ ಜಿಲ್ಲೆ ಕೋಲ್ಹಾರ ಬಳಿ ಕಲಾದಗಿ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಯಾರಿವರು…?

ಆ್ಯಸಿಡ್ ದಾಳಿಗೆ ಒಳಗಾದ ಲಕ್ಷ್ಮೀ ಹಾಗೂ ಆರೋಪಿ ಮೌನೇಶ್ ಇಬ್ಬರೂ ಮೂಲತಃ ವಿಜಯಪುರ ನಗರ ಮೂಲದವರು ಎನ್ನಲಾಗಿದೆ.
ಇವರಿಬ್ಬರಿಗೂ ಪ್ರತ್ಯೇಕ ಮದುವೆ ಆಗಿದ್ದಾರೆ. ಕಳೆದ ಮೂರು ವರ್ಷದಿಂದ ಇಬ್ವರು ಹತ್ತಿರವಾಗಿದ್ದರು. ಒಂದುವರೆ ತಿಂಗಳಿಂದ ಗದ್ದನಕೇರಿ ಕ್ರಾಸ್ ನಲ್ಲಿ ಒಂದೇ ಮನೆಯಲ್ಲಿ ಲಿವಿಂಗ್ ಟುಗೆದರ್ ರೀತಿ ವಾಸವಾಗಿದ್ದರು.
ಲಕ್ಷ್ಮೀ ಬಡಗೇರಿ ಮೇಲೆ ಆರೋಪಿ ಮೌನೇಶ್ ಪದೇ ಪದೆ ಸಂಶಯ ಪಡುತ್ತಿದ್ದನಂತೆ. ಇದರಿಂದ ಇಬ್ಬರ ಮಧ್ಯ ಮೇಲಿಂದ ಮೇಲೆ ಜಗಳವೂ ಆಗುತ್ತಿತ್ತು. ಕಳೆದ ಒಂದು ವಾರದಿಂದ ಮೌನೇಶ್ ಮನೆಬಿಟ್ಟು ಹೋಗಿದ್ದ. ಮಹಿಳೆ ಆತನ ನಂಬರ್ ಬ್ಲಾಕ್ ಮಾಡಿದ್ದಳು. ಸೋಮವಾರ ರಾತ್ರಿ ಮನೆಗೆ ಬಂದಿದ್ದ ಮೌನೇಶ್ ಗೆ ಬಾಗಿಲು ತೆರೆದಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಮೌನೇಶ್, ಕಿಟಕಿಯಿಂದ ನೀರು ಮಿಶ್ರಿತ ಆ್ಯಸಿಡ್ ಎರೆಚಿದ್ದಾನೆ. ಮೌನೇಶ್ ಮೂರ್ತಿ ತಯಾರಿಕೆ ಕೆಲಸ ಮಾಡುತ್ತಾನೆ. ಇದರಿಂದ ಆತನ‌ ಬಳಿ ನೀರು ಮಿಶ್ರಿತ ಆ್ಯಸಿಡ್, ಇದ್ದು, ಮಹಿಳೆಯ ಮೇಲೆ ಎರೆಚಿದ್ದಾನೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net