ಮಹಿಳೆ ಮೇಲೆ ದೌರ್ಜನ್ಯಕ್ಕೆ ಯತ್ನಿಸಿದವನಿಗೆ ಥಳಿತ

final 111
Published on

ಆನೇಕಲ್: ಮಹಿಳೆ ಮೇಲೆ ದೌರ್ಜನ್ಯ ಎಸಗಲು ಯತ್ನಿಸಿದ ವ್ಯಕ್ತಿಗೆ ಯುವಕರ ಗುಂಪು ಮನಸೋ ಇಚ್ಛೆ ಹಲ್ಲೆ ಮಾಡಿದೆ. ಧಾರವಾಡದ ನಿವಾಸಿ, ಬನ್ನೇರುಘಟ್ಟ ಸಮೀಪದ ಕಲ್ಕೆರೆ ಬಳಿ ಹೊಟೇಲ್ನಲ್ಲಿ ಅಡುಗೆ ಭಟ್ಟನಾಗಿದ್ದ ರವಿಕುಮಾರ್(45) ಹಲ್ಲೆಗೊಳಗಾದವ. ಶನಿವಾರ ರಾತ್ರಿ 9.30ರ ಸುಮಾರಿಗೆ ರವಿಕುಮಾರ್ ನಿರ್ಜನ ಪ್ರದೇಶಕ್ಕೆ ಮಹಿಳೆಯನ್ನು ಎಳೆದೊಯ್ಯಲು ಯತ್ನಿಸಿದ್ದು, ಆಕೆ ಆತನ ಕೈ ಕಚ್ಚಿ ತಪ್ಪಿಸಿಕೊಂಡು ನೆರವಿಗಾಗಿ ಕಿರುಚಾಡಿದ್ದಾಳೆ ಎನ್ನಲಾಗಿದೆ. ಈ ವೇಳೆಗೆ ಗಣೇಶ ವಿಸರ್ಜನೆ ಮಾಡಿ ಬರುತ್ತಿದ್ದ ಯುವಕರ ಗುಂಪು ನೆರವಿಗೆ ಬಂದಿದ್ದು, ರವಿಕುಮಾರ್ ಸಿಕ್ಕಿಬಿದ್ದಿದ್ದಾನೆ. ಕುಡಿದ ನಶೆಯಲ್ಲಿದ್ದ ಆತ ಪ್ರಶ್ನಿಸಿದ ಯುವಕರಿಗೆ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಆಕ್ರೋಶಗೊಂಡ ಯುವಕರು, ರವಿಕುಮಾರ್ ಮೈಮೇಲಿದ್ದ ಬಟ್ಟೆ ಬಿಚ್ಚಿ ದೊಣ್ಣೆ, ಕಟ್ಟಿಗೆಯಿಂದ ಹಲ್ಲೆ ನಡೆಸಿ, ಬನ್ನೇರುಘಟ್ಟ ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಬನ್ನೇರುಘಟ್ಟ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net