ಹುಲಿಯೂರುದುರ್ಗ: ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಕೆಬ್ಬಳ್ಳಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಮಹಿಳೆ ಮೇಲೆ ಚಿರತೆ ದಾಳಿ ನಡೆಸಿದೆ. ಕೆಬ್ಬಳ್ಳಿ ಗ್ರಾಮದ ಪುಟ್ಟಲಿಂಗಮ್ಮ (63) ಚಿರತೆ ದಾಳಿಗೆ ಒಳಗಾದವರು. ತೋಟದ ಬಳಿ ಮೇಕೆ ಮೇಯಿಸುತ್ತಿದ್ದ ವೇಳೆ ಮೇಕೆ ಹಿಡಿಯಲು ಬಂದ ಚಿರತೆ ಕಂಡು ಮಹಿಳೆ ಗಾಬರಿಗೊಂಡು ಕೂಗಾಡಿದ್ದಾರೆ. ಈ ವೇಳೆ ಚಿರತೆ ಮಹಿಳೆ ಮೆಲೆರಗಿ ತೋಳು ಮತ್ತು ಬೆನ್ನಿನ ಭಾಗಕ್ಕೆ ಪರಚಿ ಓಡಿ ಹೋಗಿದೆ. ಗಾಯಗೊಂಡ ಮಹಿಳೆಯನ್ನು ಕುಣಿಗಲ್ನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿರತೆ ಸೆರೆ: ಸ್ಥಳವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ, ಚಿರತೆ ಸೆರೆಗೆ ಕೆಬ್ಬಳ್ಳಿ ಗ್ರಾಮದ ಬಳಿ ಬೋನು ಇಟ್ಟಿದ್ದರು. ಮಂಗಳವಾರ ಮುಂಜಾನೆ ನಾಲ್ಕು ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ ಎಂದು ವಲಯ ಅರಣ್ಯಾಧಿಕಾರಿ ಪಿ.ಜಗದೀಶ್ ತಿಳಿಸಿದ್ದಾರೆ.