ಮಹಿಳೆ ಧೈರ್ಯವಾಗಿ ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕು:ಬಿ.ಕೆ. ರವಿಕಾಂತ್

ಮಹಿಳೆ ಧೈರ್ಯವಾಗಿ ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕು:ಬಿ.ಕೆ. ರವಿಕಾಂತ್
Published on

ಹಾಸನ: ಮಹಿಳೆಯು ಮೊದಲು ಸ್ಥಿರವಾಗಿ, ಧೃಡವಾಗಿ, ಧೈರ್ಯವಾಗಿ ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ. ರವಿಕಾಂತ್ ಹೇಳಿದರು.
ನಗರದ ಆರ್.ಸಿ. ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಸಂವಿಧಾನದಲ್ಲಿ ವಿಶೇಷವಾದಂತಹ ಸ್ಥಾನ ಮಾನವಿದ್ದು, ಕಾನೂನನ್ನ ರಕ್ಷಣಾ ಆಯುಧವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಮಹಿಳೆಯರು ತಮಗಿರುವ ಕಾನೂನನ್ನು ಒಳ್ಳೆಯ ಕೆಲಸಕ್ಕೆ ಸದುಪಯೋಗ ಪಡಿಸಿಕೊಳ್ಳಬೇಕು. ಮಹಿಳೆಯರು ಒಳ್ಳೆಯ ಶಿಕ್ಷಣವನ್ನು ಪಡೆದು ಜ್ಞಾನಾರ್ಜನೆಯನ್ನು ವೃದ್ಧಿಪಡಿಸಿಕೊಳ್ಳಬೇಕು. ಯುವತಿಯರು ಕ್ಷಣಿಕ ಸುಖಕ್ಕಾಗಿ ಜೀವನದಲ್ಲಿನ ಅಮೂಲ್ಯ ಅವಕಾಶಗಳನ್ನು ಕಳೆದುಕೊಳ್ಳಬಾರದು. ತಂದೆ-ತಾಯಿ, ಗುರುಗಳಿಗೆ ಗೌರವ ನೀಡಬೇಕು ಜೊತೆಗೆ ಹೆತ್ತವರಿಗೆ ಕೀರ್ತಿಯನ್ನ ತರಬೇಕು ಎಂದರು.
ವೈದ್ಯೆ ಡಾ. ಸೌಮ್ಯಮಣಿ ಮಾತನಾಡಿ, ಸಮಾಜದಲ್ಲಿ ಹೆಣ್ಣನ್ನು ಗೌರವಿಸಬೇಕು, ನ್ಯಾಯಬದ್ಧವಾದ ಸಮಾನತೆ ಹೆಣ್ಣಿಗೆ ಬೇಕು, ಸಮಾನತೆ ಸಾಮರಸ್ಯ ಕುಟುಂಬದಿಂದಲೇ ಬೆಳವಣಿಗೆ ಹೊಂದಬೇಕು ಹಾಗೂ ಮಹಿಳೆಯರು ವಿದ್ಯೆ, ಜ್ಞಾನದ ಕಡೆ ಹೆಚ್ಚಿನ ಗಮನಹರಿಸಬೇಕು. ಭಾರತ ದೇಶದ ಮಹಿಳೆಯರು ಸಧೃಢರಲ್ಲ, ಕಾರಣ ಅಕ್ಷರ ಶಿಕ್ಷಣ ಹಾಗೂ ಆರೋಗ್ಯ ಶಿಕ್ಷಣದ ಕೊರತೆಯಿಂದ ಅಬಲೆಯಾಗುತ್ತಿದ್ದಾಳೆ. ಹೆಣ್ಣು ಉತ್ತಮ ಗುರಿ ಹೊಂದಿರಬೇಕು ಇದನ್ನು ಸಾಧಿಸಲು ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಉತ್ತಮ ಪೌಷ್ಠಿಕ ಆಹಾರ ಸೇವಿಸಬೇಕು. ಅನುಕ್ಷಣವು ನಮ್ಮ ಜೀವನ ಆನಂದವಾಗಿ, ಸಂತೋಷವಾಗಿ ಮತ್ತು ಅರ್ಥಪೂರ್ಣವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ.ಮಂಜಯ್ಯ ಮಾತನಾಡಿ, ಒಬ್ಬ ಮನುಷ್ಯನಿಗೆ ತನ್ನ ಹಕ್ಕುಗಳೆನು ಎಂದು ತಿಳಿದುಕೊಳ್ಳುವವರೆಗು ಶೋಷಣೆ ನಡೆಯುತ್ತಲೆ ಇರುತ್ತದೆ. ಕಾನುನನ್ನು ಹೇಗೆ ಬಳಸಿಕೊಳ್ಳಬೇಕೆಂದು ಪ್ರತಿಯೊಬ್ಬರಿಗು ಮೊದಲು ತಿಳಿದಿರಬೇಕು. ಹೆಣ್ಣಿಗೆ ಆರ್ಥಿಕವಾಗಿ, ಸಾಮಜಿಕವಾಗಿ ಸಮಾನತೆ ಬೇಕು. ಬದುಕಿನಲ್ಲಿ ಕಾನೂನು ಹಾಗು ಆರೋಗ್ಯ ಎರಡರ ಬಗ್ಗೆಯೂ ತಿಳಿದುಕೊಂಡಿರಬೇಕು. ಹೆಣ್ಣಿಗೆ ತುಂಬಾ ಅವಕಾಶಗಳಿವೆ, ಆದರೆ ಅದೃಷ್ಟ ಗ್ರಹಚಾರ ಎಂಬ ಕಲ್ಪನೆಗಳನ್ನು ಮಾಡಿಕೊಳ್ಳಬಾರದು. ಕಾನೂನಾತ್ಮಕ ಹಕ್ಕುಗಳನ್ನು ಗಂಡು ಹೆಣ್ಣು ಇಬ್ಬರು ತಿಳಿದುಕೊಂಡಿರಬೇಕು. ಈ ಮಣ್ಣಿನಲ್ಲಿ ಮಹಿಳೆಯರು ಪುರುಷರಷ್ಟೆ ಸಮಾನರಾಗಿರಬೇಕು. ಆರೋಗ್ಯಯುತವಾದ ಜಗತ್ತನ್ನು ಕಟ್ಟಬೇಕಾಗಿದ್ದು, ಇತರರ ಬಗ್ಗೆ ಆಲೋಚನೆ ಮಾಡುವ ಬದಲು ನಾವು ಮೊದಲು ಹೇಗೆ ಇದ್ದೇವೆ ಮುಂದೆ ಏನಾಗಬೇಕು ಎನ್ನುವುದರ ಬಗ್ಗೆ ಮಾತ್ರ ಆಲೋಚಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಕೀಲೆ ಗಿರೀಜಾಂಬಿಕಾ, ಎ.ಬಿ.ವಿ.ಪಿ. ಸಾಮಾಜಿಕ ಜಾಲತಾಣ ಪ್ರಮುಖ್ ಎಂ. ಅನುಷಾ, ಅಧ್ಯಾಪಕಿ ಡಾ.ಎಚ್.ಇ. ಸಾವಿತ್ರಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net