ಮಹಿಳೆ ಗುರಿ ಸಾಧನೆಗೆ ಕೌಶಲ್ಯಾಭಿವೃದ್ಧಿ ತರಬೇತಿ ಸಹಕಾರಿ

11 ckm 2
ಚಿಕ್ಕಮಗಳೂರಿನ ಅಂಬೇಡ್ಕರ್ ಭವನದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಪ್ರದೇಶ ಮಟ್ಟದ ಒಕ್ಕೂಟ ಸದಸ್ಯರುಗಳಿಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಬಿಂದ್ಯಾ, ಶಿವಲಿಂಗಯ್ಯ, ಚಂದ್ರಶೇಖರ್, ಚಂದ್ರಶೇಖರಪ್ಪ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಪ್ರತಿಯೊಬ್ಬ ಮಹಿಳೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿ ತನ್ನ ಜೀವನದಲ್ಲಿ ಗುರಿ ಮುಟ್ಟಲು ಕೌಶಲ್ಯಾಭಿವೃದ್ಧಿ ತರಬೇತಿ ಸಹಕಾರಿ ಎಂದು ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಗರಸಭೆ ವತಿಯಿಂದ ಏರ್ಪಡಿಸಲಾಗಿದ್ದ ಪ್ರದೇಶ ಮಟ್ಟದ ಒಕ್ಕೂಟ ಸದಸ್ಯರುಗಳಿಗೆ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಅನುಕೂಲ ಕಲ್ಪಿಸಲು ವಿವಿಧ ಇಲಾಖೆಗಳ ಮೂಲಕ ಬ್ಯಾಂಕಿನಲ್ಲಿ ಸಾಲಸೌಲಭ್ಯ ನೀಡಲು ಮುಂದಾಗಿದೆ ಎಂದು ತಿಳಿಸಿದರು.

ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಸಮಪಾಲು, ಸಮಬಾಳು ಎಂಬ ನಿಟ್ಟಿನಲ್ಲಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕಾಗಿದೆ. ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆನೀಡಿದರು.

ಮಹಿಳೆಯರು ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರಬಲರಾಗಬೇಕೆಂದು ಸರ್ಕಾರ ಬ್ಯಾಂಕ್‌ಗಳ ಮೂಲಕ ಸಹಾಯಧನದ ಸಾಲಸೌಲಭ್ಯಗಳನ್ನು ನೀಡಲು ಮುಂದಾಗಿದೆ. ಸ್ವ-ಉದ್ಯೋಗ ಆರಂಭಿಸುವ ಮೂಲಕ ಮಹಿಳೆಯರು ಅರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.

ಆರ್ಥಿಕವಾಗಿ, ಆರೋಗ್ಯವಾಗಿ ಕೌಟುಂಬಿಕವಾಗಿ ಬಲಗೊಂಡಾಗ ಮಾತ್ರ ಸಮಾಜದಲ್ಲಿ ಸಮಸ್ಯೆಗಳನ್ನು ಎದುರಿಸಲು ಸಾಧ್ಯ. ಈ ಕೌಶಲ್ಯಾಭಿವೃದ್ಧಿಯ ತರಬೇತಿಯನ್ನು ಪಡೆದ ಬಳಿಕ ಸಮಾಜದಲ್ಲಿ ಉತ್ತಮ ಉದ್ಯಮಿಯಾಗಿ ಗೌರವದಿಂದ ಬದುಕಲು ನೆರವಾಗಲಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಿಂಧ್ಯಾ ಮಾತನಾಡಿ, ಮಹಿಳೆಯರು ದೌರ್ಜನ್ಯಕ್ಕೊಳಗಾದಾಗ ಮೊದಲಿಗೆ ಆಪ್ತಸಮಾಲೋಚನೆ, ವೈದ್ಯಕೀಯ ಸೌಲಭ್ಯ, ಪೊಲೀಸ್ ಸಹಾಯ, ಕಾನೂನು ನೆರವು ಹಾಗೂ ತಾತ್ಕಾಲಿಕ ಆಶ್ರಯ ದೊರೆಯಲಿದೆ ಎಂದು ತಿಳಿಸಿದರು.

ಮಹಿಳೆಯರು ದೌರ್ಜನ್ಯಕ್ಕೊಳಗಾಗಿ ತೊಂದರೆಯಲ್ಲಿ ಸಿಲುಕಿಕೊಂಡಾಗ ಮಹಿಳಾ ಸಹಾಯವಾಣಿ-೧೮೧ ಈ ಸಂಖ್ಯೆಗೆ ಕರೆಮಾಡಿ ತಮ್ಮ ಸಮಸ್ಯೆಗಳ ದೂರು ನೀಡಬಹುದಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಮೊದಲ ಬಾರಿ ಗರ್ಭಿಣಿಯರಿಗೆ ೫ ಸಾವಿರ ರೂ ಸಹಾಯಧನ, ೨ನೇ ಬಾರಿ ಹೆಣ್ಣುಮಗು ಜನನವಾದರೆ ೬ ಸಾವಿರ ರೂ. ಧನಸಹಾಯ ದೊರೆಯಲಿದೆ. ಇದರ ಸಮಗ್ರ ಮಾಹಿತಿಗೆ ಹತ್ತಿರದ ಅಂಗನವಾಡಿ ಕೇಂದ್ರಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖಾ ಅಧಿಕಾರಿ ಶಿವಲಿಂಗಯ್ಯ, ನಗರಸಭೆ ಸಿಇಓ ಚಂದ್ರಶೇಖರ್, ಸಮುದಾಯ ಸಂಘಟನಾಧಿಕಾರಿ ಚಂದ್ರಶೇಖರಪ್ಪ ಹಾಗೂ ಸ್ತಿçÃಶಕ್ತಿ ಸ್ವ-ಸಹಾಯ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net