ಮಹಿಳಾ ಸ್ವಸಹಾಯ ಗುಂಪುಗಳಿಗೆ 58 ಕೋಟಿ ರೂ. ಸಾಲ

14 NRD-2
Published on

ನರಗುಂದ: ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಲ್ಯಾಪ್​ಟಾಪ್, ಟ್ಯಾಬ್, ಆನ್​ಲೈನ್ ಕ್ಲಾಸ್ ಹಾಗೂ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಡೆಸ್ಕ್​ಗಳನ್ನು ವಿತರಿಸಲಾಗಿದೆ ಎಂದು ಧರ್ಮಸ್ಥಳ ಸಂಸ್ಥೆ ಕಲ್ಯಾಣ ಕರ್ನಾಟಕದ ಪ್ರಾದೇಶಿಕ ನಿರ್ದೇಶಕ ಪಿ.ಕೆ. ಪುರುಷೋತ್ತಮ ಹೇಳಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ತಾಲೂಕಿನ ಕಲ್ಲಾಪೂರ ಗ್ರಾಮದ ಶ್ರೀ ಬಸವೇಶ್ವರ ಸಮುದಾಯ ಭವನಕ್ಕೆ ನೀಡಿರುವ 5 ಲಕ್ಷ ರೂ.ಗಳ ಸಹಾಯಧನದ ಚೆಕ್ ಅನ್ನು ಸೋಮವಾರ ವಿತರಿಸಿ ಅವರು ಮಾತನಾಡಿದರು. ನರಗುಂದ ಮತ್ತು ರೋಣ ತಾಲೂಕಿನಾದ್ಯಂತ ಒಟ್ಟು, 4 ಸಾವಿರ ಮಹಿಳಾ ಸ್ವಸಹಾಯ ಗುಂಪುಗಳಿದ್ದು, ಇವುಗಳಿಗೆ 58 ಕೋಟಿ ರೂ.ಗಳ ಸಾಲ ವಿತರಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ‘ನಮ್ಮ ಊರು, ನಮ್ಮ ಕೆರೆ’ ಯೋಜನೆಯಡಿ ಕುಡಿಯುವ ನೀರು ಅಭಿವೃದ್ಧಿಪಡಿಸಿಕೊಳ್ಳುವ ಹಾಗೂ ಸಮುದಾಯ ಭವನ, ದೇವಸ್ಥಾನ ನೀರ್ವಣ ಮತ್ತು ಅಭಿವೃದ್ಧಿ ಸಾಕಷ್ಟು ಧನಸಹಾಯ ನೀಡಲಾಗಿದೆ. ಪ್ರತಿವರ್ಷ ವೀರೇಂದ್ರ ಹೆಗ್ಗಡೆ ಅವರ ಜನ್ಮದಿನದ ಪ್ರಯುಕ್ತ ಅನಾಥರಿಗೆ ವಾತ್ಸಲ್ಯ ಕಿಟ್ ಹಾಗೂ ನಿರ್ಗತಿಕರಿಗೆ ಪ್ರತಿ ತಿಂಗಳು ಮಾಸಾಶನ ರೂಪದಲ್ಲಿ 750 ರಿಂದ 1 ಸಾವಿರ ರೂಪಾಯಿವರೆಗೆ ಧನಸಹಾಯ ನೀಡಲಾಗುತ್ತಿದೆ ಎಂದರು.

ಭೈರನಹಟ್ಟಿ ಶಾಂತಲಿಂಗ ಶ್ರೀಗಳು ಮಾತನಾಡಿ, ನಾಡಿನ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರ ಹಾಗೂ ಮಠ-ಮಂದಿರಗಳ ಜೀಣೋದ್ಧಾರಕ್ಕಾಗಿ ಡಾ.ವೀರೇಂದ್ರ ಹೆಗ್ಗಡೆ ಅವರು ನಿರಂತರವಾಗಿ ಧನಸಹಾಯ ಮಾಡುತ್ತಿದ್ದಾರೆ. ಅವರು ಮಾಡಿರುವ ಕಾಯಕ ಸೂರ್ಯ, ಚಂದ್ರ ಇರುವವರೆಗೂ ಅಜರಾಮರವಾಗಿರಲಿದೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ, ತಾಪಂ ಸದಸ್ಯ ಪ್ರಕಾಶಗೌಡ ತಿರಕನಗೌಡ್ರ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಜಿಲ್ಲಾ ನಿರ್ದೇಶಕ ಶಿವಾನಂದ ಆಚಾರ್ಯ, ಯೋಜನಾಧಿಕಾರಿ ವಸಂತಿ ಅಮೀನ, ಆರ್.ವೈ. ಮುಳಗುಂದ, ಎಂ. ನಿಂಗಪ್ಪ, ವಿವಿಧ ಸ್ವಸಹಾಯ ಸಂಘದ ಸದಸ್ಯರು, ವಯಲ ಸೇವಾ ಪ್ರತಿನಿಧಿಗಳು, ದೇವಸ್ಥಾನದ ಟ್ರಸ್ಟ್ ಕಮಿಟಿ ಸದಸ್ಯರು ಉಪಸ್ಥಿತರಿದ್ದರು. ಶಿವಾನಂದ ಲಕಾಟಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net