ಮಹಿಳಾ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಅಡುಗೆಗೂ ಸೈ ಆಟಕ್ಕೂ ಸೈ

ಮಹಿಳಾ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಅಡುಗೆಗೂ ಸೈ ಆಟಕ್ಕೂ ಸೈ
Published on

ಹಾಸನ: ನಗರದ ಆರ್.ಸಿ. ರಸ್ತೆ ಗಂಧದ ಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಸಾಂಸ್ಕೃತಿಕ ವೇದಿಕೆ ವತಿಯಿಂದ ಕ್ಯಾಂಟೀನ್ ಡೇ ಹಾಗೂ ಹಳ್ಳಿ ಆಟೋಟ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಗಳಲ್ಲಿ ಭಾಗವಹಿಸಿದ ನೂರಾರು ವಿದ್ಯಾರ್ಥಿನಿಯರು ಇಡೀ ದಿನ ತಮ್ಮ ದಿನನಿತ್ಯ ಪಠ್ಯದ ಚಟುವಟಿಕೆಗಳಿಂದ ಹೊರ ಬಂದು ತಮ್ಮಲ್ಲಿ ಇದ್ದ ಪ್ರತಿಭೆಯನ್ನು ಹೊರ ಹಾಕುವ ಮೂಲಕ ಅಧ್ಯಾಪಕರ ಮುಂದೆ ಸೈ ಎನ್ನಿಸಿಕೊಂಡರು.
ಆರಂಭದಲ್ಲಿ ಸುಮಾರು 42 ಮಂದಿ ವಿದ್ಯಾರ್ಥಿನಿಯರು ಕಾಲೇಜು ಆವರಣದಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು ಬಂದು ಎಲ್ಲರನ್ನು ಆಕರ್ಷಿಸುವಂತೆ ಅಡುಗೆ ಮಾಡುವ ಮೂಲಕ ತಮ್ಮ ನಳಪಾಕದ ವಿದ್ಯೆಯನ್ನು ಪ್ರದರ್ಶಿಸಿದರು. ಅದರಲ್ಲಿ ಕೆಲವು ವಿದ್ಯಾರ್ಥಿನಿಯರು ಸುಡು ಬಿಸಿಲಿನಿಂದ ಕಂಗಾಲಾಗಿದ್ದವರಿಗೆ ಆರೋಗ್ಯಕರವಾದ ನಿಂಬೆ ಹಣ್ಣಿನ ಹಾಗೂ ಹಿರಳಿಕಾಯಿ ಪಾನೀಯ ಮಾಡಿಕೊಟ್ಟರು. ಎಳನೀರು ಎಲ್ಲರನ್ನೂ ಆಕರ್ಷಿಸುವುದರ ಜೊತೆಗೆ ಸುಮಾರು ನಾಲ್ಕೈದು ಗಂಟೆಯಲ್ಲಿಯೇ ಮಾರಾಟವಾಗಿ ಹೆಚ್ಚು ಬೇಡಿಕೆ ಗಿಟ್ಟಿಸಿಕೊಂಡಿತು. ಇನ್ನು ಮಜ್ಜಿಗೆ ವ್ಯಾಪಾರ ಮಾಡಿದ ಎಲ್ಲರಿಗೂ ಉತ್ತಮ ವ್ಯಾಪಾರವಾಯಿತು. ಇನ್ನು ಉಳಿದಂತೆ ಪಾನಿಪೂರಿ, ಮಾವಿನ ಕಾಯಿ ಮಸಾಲ ಸೇರಿದಂತೆ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಖಾದ್ಯಗಳು ಎಲ್ಲವೂ ವ್ಯಾಪಾರವಾಗಿದ್ದು, ವಿಶೇಷವಾಗಿತ್ತು. ಕೆಲವು ವಿದ್ಯಾರ್ಥಿನಿಯರು ಹಾಗೂ ಅಧ್ಯಾಪಕರು ವಿದ್ಯಾರ್ಥಿನಿಯರು ಸಿದ್ಧಪಡಿಸಿದ್ದ ಆಹಾರಗಳಿಗೆ ಫಿದಾ ಆಗಿ ತಮ್ಮ ಮನೆಗಳಿಗೆ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದ ವಿಶೇಷವಾಗಿತ್ತು.
ನಂತರ ಆರಂಭವಾದ ಕ್ರೀಡಾ ಕೂಟದಲ್ಲಿ ನೀರು ಬಿಂದಿಗೆಯನ್ನು ಹೊತ್ತು ಓಡುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರು ಎರಡು ಬಿಂದಿಗೆಯನ್ನು ಹೊತ್ತು ಸರಾಗವಾಗಿ ಓಡುತ್ತಿದ್ದರೆ ಸ್ನೇಹಿತೆಯರ ಪ್ರೋತ್ಸಾಹ ಶಿಳ್ಳೆ, ಚಪ್ಪಾಳೆ ಎಲ್ಲರ ಗಮನ ಸೆಳೆಯುತ್ತಿತ್ತು. ಅಂತಿಮವಾಗಿ ಕಾಲೇಜಿನ ವಿದ್ಯಾರ್ಥಿನಿಯರಾದ ಭವಾನಿ (ಪ್ರಥಮ), ಪ್ರೀತಿ (ದ್ವಿತೀಯ) ಹಾಗು ಚಂದ್ರಿಕಾ (ತೃತೀಯ) ಬಹುಮಾನ ಪಡೆದುಕೊಂಡರು. ಇನ್ನೂ ಮೂರು ಕಾಲಿನ ಓಟ ಮೈ ಜುಮ್ಮೆನ್ನುವಂತಿತ್ತು, ಇಬ್ಬರು ವಿದ್ಯಾರ್ಥಿಗಳು ತಮ್ಮ ಒಂದೊಂದು ಕಾಲನ್ನು ಸೇರಿಸಿ ಕಟ್ಟಿಕೊಂಡು ಒಟ್ಟಿಗೆ ಓಡುವುದನ್ನು ನೋಡಿ ಇತರೆ ವಿದ್ಯಾರ್ಥಿಗಳು ಶಿಳ್ಳೆ ಹೊಡೆದು ಪ್ರೋತ್ಸಾಹಿಸಿದರು. ಕೆಲವು ವಿದ್ಯಾರ್ಥಿನಿಯರು ಮುಗ್ಗರಿಸಿ ಬಿದ್ದು ಪೆಟ್ಟು ಮಾಡಿಕೊಂಡರು ಛಲ ಬಿಡದೆ ಹೋರಾಟ ಮಾಡಿ ಬಹುಮಾನ ಗಿಟ್ಟಿಸಿಕೊಂಡರು. ಈ ಸ್ಪರ್ಧೆಯಲ್ಲಿ ಪ್ರೀತಿ/ಲಿಖಿತಾ (ಪ್ರಥಮ), ದೀಪಾವರ್ಷಿಣಿ/ರಕ್ಷಿತಾ (ದ್ವಿತೀಯ) ಹಾಗೂ ವರ್ಷಿತಾ/ಚಂದ್ರಿಕಾ (ತೃತೀಯ) ಬಹುಮಾನ ಪಡೆದುಕೊಂಡರು.
ಮೈ ರೋಮಾಂಚನಗೊಳಿಸಿದ ಹಗ್ಗ-ಜಗ್ಗಾಟ!
ಕಾರ್ಯಕ್ರಮದಲ್ಲಿ ಎಲ್ಲರ ಮೈ ರೋಮಾಂಚನವನ್ನೂಂಟು ಮಾಡಿದ ಸ್ಪರ್ಧೆಯೆಂದರೆ ಅದು ಹಗ್ಗ ಜಗ್ಗಾಟ. ಸುಮಾರು 13ಕ್ಕೂ ಅಧಿಕ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಪ್ರತಿ ತಂಡದ ವಿದ್ಯಾರ್ಥಿನಿಯರು ಯಾವ ಪುರುಷರಿಗು ಕಮ್ಮಿ ಇಲ್ಲ ಎಂಬಂತೆ ತಮ್ಮ ಶಕ್ತಿ ಪ್ರದರ್ಶಿಸಿದರು. ಅಂತಿಮವಾಗಿ ಅಂತಿಮ ವರ್ಷದ ಕಲಾ ವಿಭಾಗದ (ಕೆ.ಜೆ) ವಿದ್ಯಾರ್ಥಿನಿಯರ ಹಾಸನಾಂಬ ತಂಡ (ಪ್ರಥಮ) ಸ್ಥಾನ ಪಡೆದುಕೊಂಡರೆ ದ್ವಿತೀಯ ಬಿ.ಸಿ.ಎ. ವಿದ್ಯಾರ್ಥಿನಿಯರ ತಂಡ (ದ್ವಿತೀಯ) ಸ್ಥಾನ ಪಡೆದುಕೊಂಡಿತು. ನಂತರ ನಡೆದ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಶ್ರೇಯಾಂಕಾ (ಪ್ರಥಮ), ಚಂದ್ರಿಕಾ (ದ್ವಿತೀಯ) ಹಾಗೂ ದೀಪವರ್ಷಿಣಿ (ತೃತೀಯ) ಬಹುಮಾನ ಪಡೆದುಕೊಂಡರು. ಲೆಮನ್ ವಿತ್ ಸ್ಫೂನ್ ಸ್ಪರ್ಧೆಯಲ್ಲಿ ಚಂದ್ರಿಕಾ (ಪ್ರಥಮ), ಖುಷಿ (ದ್ವಿತೀಯ), ಸಿಂಚಿನಾ (ತೃತೀಯ) ಬಹುಮಾನ ಪಡೆದುಕೊಂಡರು.
ಕಾಲೇಜು ಪ್ರಾಂಶುಪಾಲ ಡಿ.ಕೆ. ಮಂಜಯ್ಯ, ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ (ಸ್ವಾಯತ್ತ) ಕಾಲೇಜಿನ ವ್ಯವಸ್ಥಾಪಕ ಕೆ.ಟಿ. ಸತ್ಯಮೂರ್ತಿ, ಕಾರ್ಯಕ್ರಮಗಳ ಸಂಚಾಲಕ ಡಾ.ಸಿ.ಎಲ್. ಶಿವಕುಮಾರ್, ಸಾಂಸ್ಕೃತಿಕ ವೇದಿಕೆ ಸಂಚಾಲಕ ಮೋಹನ್ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಹೇಮಲತಾ ಹಾಗೂ ಕಾಲೇಜಿನ ಎಲ್ಲಾ ಅಧ್ಯಾಪಕರು ವಿದ್ಯಾರ್ಥಿನಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net