

ಹೊಳಲ್ಕೆರೆ: ಮಹಿಳೆಯರು ಸಮಾನ ಸ್ಥಾನದೊಂದಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಇರಬೇಕೆಂಬ ಆಶಯವನ್ನು ಲಿಂಗೈಕ್ಯ ಮಲ್ಲಿಕಾರ್ಜುನ ಸ್ವಾಮೀಜಿ ಹೊಂದಿದ್ದರು ಎಂದು ಮುರುಘಾಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.
ಹೊಳಲ್ಕೆರೆ ಒಂಟಿ ಕಂಬದ ಮುರುಘಾಮಠದಲ್ಲಿ ಮಂಗಳವಾರ ಲಿಂಗೈಕ್ಯ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರ 29ನೇ ಸ್ಮರಣೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.
ಮಹಿಳಾ ಸಮಾನತೆಯಡೆ ಶ್ರೀಗಳು ಧ್ವನಿ ಎತ್ತಿದ್ದರು. ನಾವಾಡುವ ಮಾತು ಬೆಳಕು ಮೂಡಿಸುವಂತಿರಬೇಕೆಂಬ ಅಭಿಪ್ರಾಯವನ್ನು ಹೊಂದಿದ್ದ ಶ್ರೀಗಳು, ಜ್ಞಾನದ ಭಂಡಾರವೇ ಆಗಿದ್ದರು. ಶ್ರೀಮಠದ ಇತಿಹಾಸದಲ್ಲಿ ಅವರ ಕಾಲ ವೈಭವದ್ದಾಗಿತ್ತು. ಎಸ್‌ಜೆಎಂ ವಿದ್ಯಾಪೀಠ ಸ್ಥಾಪನೆ ನಾಡಿಗೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ಶ್ರೀಗಳು ಭಕ್ತರ ಹೃದಯ ಸಿಂಹಾಸನವನ್ನೇರಿದ್ದರು. ಸಮಾಜಕ್ಕಾಗಿ ದುಡಿಯುವ ಸ್ವಾಮೀಜಿಗಳಿಗೆ ನೋವು ಕೊಡಬಾರದೆಂದು ಅಭಿಪ್ರಾಯಪಟ್ಟರು.
ಶ್ರೀ ಮೋಕ್ಷಪತಿ ಸ್ವಾಮೀಜಿ ಮಾತನಾಡಿ, ಶ್ರೀಗಳು ಎಲ್ಲ ಸಮುದಾಯದವರನ್ನು ಪ್ರೀತಿಸುತ್ತಿದ್ದರು. 1966ರಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿ, ಅನೇಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವಾಗಿದ್ದರು. ಅವರು ಸಲ್ಲಿಸಿದ ಸಾಹಿತ್ಯಿಕ ಸೇವೆ ಅಪಾರ ಎಂದರು.
ಶ್ರೀ ಶಿವಬಸವ ಸ್ವಾಮೀಜಿ ಮಾತನಾಡಿ, ಮಲ್ಲಿಕಾರ್ಜುನ ಶ್ರೀಗಳು ಶೈಕ್ಷಣಿಕ ಕ್ರಾಂತಿ ಮಾಡದಿದ್ದರೆ ಬಡ ವಿದ್ಯಾರ್ಥಿಗಳಿಗೆ ಸಾಕಷ್ಟು ನಷ್ಟವಾಗುತ್ತಿತ್ತು. ಇಡೀ ಭಾರತದಲ್ಲಿ ಶೂನ್ಯ ಪರಂಪರೆ ಎಂದರೆ ಚಿತ್ರದುರ್ಗದ ಶ್ರೀ ಮುರುಘಾಮಠ. ಈ ಪರಂಪರೆಯನ್ನು ಎತ್ತರಕ್ಕೆ ಕೊಂಡೊಯ್ದ ಕೀರ್ತಿ ಮಲ್ಲಿಕಾರ್ಜುನ ಶ್ರೀಗಳಿಗೆ ಸಲ್ಲುತ್ತದೆ ಎಂದರು.
ಶ್ರೀ ಬಸವಾದಿತ್ಯ ದೇವರು, ಬಸವ ಯಾದವಾನಂದ ಸ್ವಾಮೀಜಿ, ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ಶ್ರೀಬಸವ ರಮಾನಂದ ಸ್ವಾಮೀಜಿ, ಪಂಚಾಕ್ಷರಯ್ಯ, ಚಂದ್ರಶೇಖರ ಸ್ವಾಮೀಜಿ, ಗೋಕಾಕ್‌ನ ರವಿಶಂಕರ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯರು, ಗಜದಂಡ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಕೇತೇಶ್ವರ ಸ್ವಾಮೀಜಿ, ಮುರುಘರಾಜ ದೇಶೀಕೇಂದ್ರ ಸ್ವಾಮೀಜಿ, ಎಚ್.ಆನಂದಪ್ಪ, ಕೆ.ಎಂ.ವೀರೇಶ್, ಎಸ್‌ಎಂಎಲ್ ತಿಪ್ಪೇಸಾಮಿ, ನಾಗರಾಜ್ ಮತ್ತಿತರರು ಇದ್ದರು.
ಶಾಸಕ ಚಂದ್ರಪ್ಪ ಮತ್ತು ಪ.ಪಂ.ಸದಸ್ಯ ಮುರುಗೇಶ್ ಸ್ಮರಣೋತ್ಸವದ ದಾಸೋಹ ಸೇವೆ ನೆರವೇರಿಸಿದರು. ಎಚ್.ಆನಂದಪ್ಪ ಗದ್ದುಗೆ ಹೂವಿನ ಅಲಂಕಾರದ ಸೇವೆ ಮಾಡಿದರು.