ಮಹಿಳಾ ಸಬಲೀಕರಣವೇ ನಮ್ಮ ಗ್ಯಾರಂಟಿ

30ydg01
Published on


ಯಾದಗಿರಿ: ಕುಟುಂಬದ ಸಮಸ್ತ ಜಿಮ್ಮೆದಾರಿಯನ್ನು ಹೊತ್ತುಕೊಂಡು ಮನೆಯ ಯಜಮಾನಿ ಆರ್ಥಿಕವಾಗಿ ಸ್ವಾವಲಂಬಿಯಾಗುವ ಮೂಲಕ ಸಮಾಜದಲ್ಲಿ ಗೌರವವದಿಂದ ಜೀವನ ಸಾಗಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅಭಿಪ್ರಾಯಪಟ್ಟರು.

ಬುಧವಾರ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಗೆ ದೀಪ ಬೆಳಗುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿ, ಎಲ್ಲಿ ಮಹಿಳೆಯನ್ನು ಪೂಜ್ಯನೀಯ ಭಾವದಿಂದ ಕಾಣಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ಸಂಸ್ಕೃತದ ವಾಣಿ ಹೇಳಿದಂತೆ ನಮ್ಮ ಸರ್ಕಾರಮಹಿಳೆಗೆ ಗೌರವವನ್ನು ಕೊಡುವ ನಿಟ್ಟಿನಲ್ಲಿ ಶಕ್ತಿ, ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದು ಸೂಚ್ಯವಾಗಿ ನುಡಿದರು.

ಮನೆಯ ಯಜಮಾನರು ಕಷ್ಟದಿಂದ ಮನೆಯ ಸಂಸಾರವನ್ನು ನಡೆಸುತ್ತಾರೆ. ಆ ಕಷ್ಟ ಮನೆಯ ಯಜಮಾನಿಗೆ ಮಾತ್ರ ತಿಳಿದಿರುತ್ತದೆ. ಹಾಗಾಗಿ ಪ್ರತಿಯೊಂದು ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ಕೊಡಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು 2.64 ಲಕ್ಷ ಕುಟುಂಬಗಳನ್ನು ಗುರುತಿಸಲಾಗಿದ್ದು, ಈಗಾಗಲೇ 2.18 ಲಕ್ಷ ಕುಟುಂಬಗಳಿಗೆ ಡಿಬಿಟಿ ಮೂಲಕ ಹಣವನ್ನು ವಗರ್ಾವಣೆ ಮಾಡಲಾಗುತ್ತದೆ. ವಿಶೇಷವಾಗಿ ಜಿಲ್ಲೆಗೆ ಸುಮಾರು 48 ಕೋಟಿ ರೂ.ವಗರ್ಾವಣೆಯಾಗಿದೆ. ಇದಿನ್ನೂ ಹೆಚ್ಚಾಗಲಿದೆ. 30 ರಿಂದ 40 ಸಾವಿರ ಫಲಾನುಭವಿಗಳು ಈ ಯೋಜನೆಗೆ ನೋಂದಾಯಿಸಿಕೊಳ್ಳುತ್ತಿದ್ದಾರೆ. ಮಹಿಳಾ ಸಬಲೀಕರಣವೇ ನಮ್ಮ ಗ್ಯಾರಂಟಿ ಎಂದು ಹೇಳಿದರು.

ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ ಮಾತನಾಡಿ, ಸರ್ಕಾರ ನುಡಿದಂತೆ ನಡೆದಿದೆ. ರಾಜ್ಯದ ತಾಯಂದಿರು ಸ್ವಾವಲಂಬನೆಯಿಂದ ಜೀವನ ನಡೆಸಬೇಕು. ಸರ್ಕಾರ ನೀಡುತ್ತಿರುವ ಈ ಯೋಜನೆಯ ಲಾಭ ಪ್ರತಿಯೊಬ್ಬರೂ ಪಡೆದುಕೊಂಡು ನೆಮ್ಮೆದಿಯಿಂದ ಜೀವನ ನಡೆಸಬೇಕು. ಚುನಾವಣೆ ಪೂರ್ವದಲ್ಲಿ ನಮ್ಮ ನಾಯಕರು ಮೈಸೂರಿನ ಚಾಮುಂಡೇಶ್ವರಿ ದೇವಿಗೆ ನಮಸ್ಕಾರ ಮಾಡಿ ನಮ್ಮ ರಾಜ್ಯದ ಮಹಿಳೆಯರಿಗೆ ಬಡತನ ಬಾರದಂತೆ ನೋಡಿಕೊಳ್ಳುತ್ತೇವೆ ಎಂದು ಪ್ರಮಾಣ ಮಾಡಿದ್ದರು. ಅದರಂತೆ ಆ ತಾಯಿಗೆ ಹರಕೆ ತೀರಿಸಿದ್ದಾರೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಹಿಳೆಯರು ವೇದಿಕೆ ಮೇಲಿದ್ದ ಸಚಿವ, ಶಾಸಕರಿಗೆ ಹಣೆಗೆ ತಿಲಕವಿಟ್ಟು ರಾಖಿ ಕಟ್ಟಿ ಆರತಿ ಬೆಳಗಿ ಗಮನ ಸೆಳೆದರು. ನಂತರ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಯೋಜನೆಯ ಪ್ರಮಾಣಪತ್ರಗಳನ್ನು ಸಚಿವರು ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net