ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಜಾರಿ

11 HDK 1
ಎಚ್.ಡಿ.ಕೋಟೆ ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಆವರಣದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಮಹಿಳೆಯರಿಗೆ ಟಿಕೆಟ್ ನೀಡುವ ಮೂಲಕ ಶಕ್ತಿ ಯೋಜನೆಗೆ ಚಾಲನೆ ನೀಡಿದರು.
Published on

ಎಚ್.ಡಿ.ಕೋಟೆ: ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಹೆಚ್ಚು ಭಾಗಿಯಾಗಬೇಕು. ಮಹಿಳೆಯರು ಹೆಚ್ಚು ಭಾಗಿಯಾದರೆ ದೇಶ ಪ್ರಗತಿಯತ್ತ ಸಾಗುತ್ತದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಅಭಿಪ್ರಾಯಪಟ್ಟರು.

ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ ಸಾರಿಗೆ ಇಲಾಖೆ ಹಮ್ಮಿಕೊಂಡಿದ್ದ ಶಕ್ತಿ ಯೋಜನೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆ ಜಾರಿ ಮಾಡಲಾಗಿದೆ. ಉಳಿದಂತೆ ಇನ್ನೂ ನಾಲ್ಕು ಯೋಜನೆಗಳನ್ನು ಹಂತಹಂತವಾಗಿ ಜಾರಿಗೆ ತರಲಾಗುತ್ತದೆ ಎಂದರು.

ಮಹಿಳೆಯರು ಶತಮಾನಗಳಿಂದ ಅವಕಾಶಗಳಿಂದ ವಂಚಿತರಾಗಿದ್ದಾರೆ. ಮಹಿಳೆಯರು ಸಮಾಜದಲ್ಲಿ ಸದೃಢವಾಗಿ ನಿಲ್ಲಲು ಮಾಡಿದ ಯೋಜನೆ ಇದಾಗಿದೆ ಎಂದರು.

ಸಾಮಾಜಿಕ ಆರ್ಥಿಕ ಅಸಮಾನತೆಗೆ ಮಹಿಳೆಯರು ಒಳಗಾಗಿದ್ದಾರೆ. ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆಯನ್ನು ಸರ್ಕಾರ ಜಾರಿ ಮಾಡಿದೆ. 5 ಗ್ಯಾರಂಟಿಗಳ ಪೈಕಿ 4 ಗ್ಯಾರಂಟಿಗಳು ಮಹಿಳೆಯರಿಗೆ ಅನುಕೂಲವಾಗಿವೆ ಎಂದರು.

ವಿರೋಧ ಪಕ್ಷದವರಿಗೆ ನಮ್ಮ ಯೋಜನೆಗಳು ಜಾರಿ ಆಗುತ್ತದೋ ಎಂಬ ಅನುಮಾನ ಇತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತರುವ ಮೂಲಕ ಇದಕ್ಕೆ ಸರಿಯಾದ ಉತ್ತರ ನೀಡಿದ್ದೇವೆ ಎಂದರು.

ತಾಲೂಕಿನಲ್ಲಿ ಶಕ್ತಿ ಯೋಜನೆಯಡಿ ಉತ್ತಮ ಸೇವೆ ನೀಡಬೇಕು. ಎಚ್.ಡಿ.ಕೋಟೆ ಬಸ್ ಘಟಕದಲ್ಲಿ 110 ಬಸ್‌ಗಳು ಇದ್ದು, 90 ಬಸ್‌ಗಳು ಚಾಲನೆ ಆಗುತ್ತಿವೆ. ಯಾವುದೇ ತಾರತಮ್ಯ ಇಲ್ಲದೆ ಮಹಿಳೆಯರು ಉಚಿತವಾಗಿ ಸಂಚರಿಸಬಹುದು. ಮಹಿಳೆಯರು ತಾಲೂಕಿನಿಂದ ಕೇರಳ ಗಡಿಭಾಗದ ಬಾವಲಿ ಚೆಕ್‌ಪೋಸ್ಟ್‌ವರೆಗೆ ಸಂಚರಿಸಲು ಅವಕಾಶ ಇದೆ ಎಂದು ತಿಳಿಸಿದರು.

ಬಸ್ ನಿಲ್ದಾಣದಲ್ಲಿ ಜನರು ಕುಡಿಯುವ ನೀರಿಗೆ ತೊಂದರೆ ಅನುಭವಿಸುತ್ತಿದ್ದು, ಮುಂದಿನ ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಅನುಕೂಲ ಕಲ್ಪಿಸಲಾಗುವುದು. ಹ್ಯಾಂಡ್‌ಪೋಸ್ಟ್‌ನಲ್ಲಿ ನಿಲ್ದಾಣದ ಸಮಸ್ಯೆ ಇದ್ದು, ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗುವುದು. ಅಧಿಕಾರಿಗಳು ಜನರಿಗೆ ಪೂರಕವಾಗಿ ಕೆಲಸ ಮಾಡಬೇಕು. ಕೋವಿಡ್ ಸಂದರ್ಭದಲ್ಲಿ ನಿಂತು ಹೋಗಿದ್ದ ಬಸ್ ಸಂಚಾರವನ್ನು ಮತ್ತೆ ಚಾಲನೆ ಮಾಡಬೇಕು ಎಂದು ಸೂಚಿಸಿದರು.
ಘಟಕ ವ್ಯವಸ್ಥಾಪಕ ತ್ಯಾಗರಾಜು ಮಾತನಾಡಿ, ಶಕ್ತಿ ಯೋಜನೆಯಲ್ಲಿ ತಾಲೂಕಿಗೆ ವರ್ಷಕ್ಕೆ 1 ಕೋಟಿ ರೂ. ವೆಚ್ಚವಾಗಲಿದ್ದು, ಶಾಸಕರು ಇದನ್ನು ಭರಿಸುವ ಭರವಸೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಿಳೆಯರು ಮಾತನಾಡಿ, ಈ ಯೋಜನೆ ಜಾರಿ ಮಾಡಿರುವುದರಿಂದ ತುಂಬ ಖುಷಿ ಆಗಿದೆ. ನುಡಿದಂತೆ ನಡೆದ ಸರ್ಕಾರ, ಮಹಿಳೆಯರಿಗೆ ಹೆಚ್ಚು ಒತ್ತು ನೀಡಿದೆೆ ಎಂದರು.

ತಹಸೀಲ್ದಾರ್ ಪಿ.ಎಸ್.ಮಹೇಶ್, ಇನ್ಸ್‌ಪೆಕ್ಟರ್ ಶಬ್ಬೀರ್, ಇಒ ಜೆರಾಲ್ಡ್ ರಾಜೇಶ್, ಹುಸೇನ್, ಪುರಸಭಾ ಸದಸ್ಯರಾದ ಎಚ್.ಸಿ.ನರಸಿಂಹಮೂರ್ತಿ, ರಾಜು ವಿಶ್ವಕರ್ಮ, ಸೋಮಶೇಖರ್, ಆಸೀಫ್, ಶಾಹೀರಾ ಬಾನು, ಚಲುವಕೃಷ್ಣ, ನವೀನ್ ದಾಸ್, ಪ್ರದೀಪ್ , ಏಜಾಜ್ ಪಾಷ, ಮನುಗನಹಳ್ಳಿ ಮಾದಪ್ಪ, ಬಸವರಾಜಪ್ಪ, ಚಿಕ್ಕವೀರನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net