ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸ್ವಾಗತ:ಶೀಘ್ರದಲ್ಲಿ ಅನುಷ್ಠಾನ ಒತ್ತಾಯ

ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸ್ವಾಗತ:ಶೀಘ್ರದಲ್ಲಿ ಅನುಷ್ಠಾನ ಒತ್ತಾಯ
Published on

    ಹಾಸನ: ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯನ್ನ ಮಂಡಿಸಿರುವುದು ಸ್ವಾಗತ, ಆದರೆ, ಇದನ್ನ ಶೀಘ್ರದಲ್ಲಿ ಅನುಷ್ಠಾನಗೊಳಿಸಬೇಕು ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ಮನವಿ ಮಾಡಿದರು.

ಮಹಿಳಾ ಸಂಘಟನೆಗಳು, ಸಂಘ-ಸಂಸ್ಥೆಗಳು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದರು ಅದರ ಫಲವಾಗಿ ಈಗ ಪ್ರಧಾನಿ ನರೇಂದ್ರ ಮೋದಿಯವರು ನೂತನ ಸಂಸತ್‌ನ ಮೊದಲ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಂಡಿಸಿದ್ದಾರೆ ಆದರೆ 2026ರ ಜನಗಣತಿ ನಂತರ ಅನುಷ್ಠಾನ ಮಾಡುವುದಾಗಿ ಹೇಳಿದ್ದು, ಇದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಮುಂಬರುವ ಲೋಕಸಭಾ ಚುನಾವಣೆಯ ವೇಳಗೆ ಜಾರಿಗೊಳಿಸಬೇಕು. 1996ರಲ್ಲಿ ಎಚ್.ಡಿ.ದೇವೇಗೌಡರು ಪ್ರಧಾನಿ ಆಗಿದ ಸಂದರ್ಭದಲ್ಲಿ ಮಹಿಳಾ ಮೀಸಲಾತಿಯನ್ನ ಮಂಡಿಸಿದ್ದರು. ಆದರೆ ಅದು ಅಂಗೀಕಾರವಾಗಿರಲಿಲ್ಲ, ಇದೀಗ ಹೊಸ ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೇ.33 ರಷ್ಟು ನಾರಿಶಕ್ತಿ ಅಧಿನಿಯಮ ಮಂಡಿಸುವ ಮೂಲಕ ಯಶಸ್ವಿ ಹೆಜ್ಜೆ ಇಟ್ಟಿದ್ದಾರೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶೇಷವಾಗಿ ಬೇಲೂರು ತಾಲೂಕಿನ ಹಳೇಬೀಡು ಹಾಗೂ ಬೇಲೂರು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿವುದು ಸಂತೋಷವಾಗಿದೆ. ನನ್ನ ಅವಧಿಯಲ್ಲಿ ಸುಧಾಮೂರ್ತಿ ನೇತೃತ್ವದಲ್ಲಿ ಆಯೋಗ ದೇವಾಲಯಕ್ಕೆ ಬಂದು ವೀಕ್ಷಣೆ ಮಾಡಿದ್ದರು. ಐತಿಹಾಸಿಕ ತಾಣಗಳಿಗೆ ವಿಶ್ವದರ್ಜೆಯ ಸ್ಥಾನ-ಮಾನ ನೀಡುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಒತ್ತಾಯಿಸಿದ್ದರು.

ತಾಣಗಳನ್ನು ಕೇವಲ ವಿಶ್ವ ದರ್ಜೆಯ ಸ್ಥಾನ ನೀಡಿದರೆ ಸಾಲದು, ಅಲ್ಲಿ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸಂಪೂರ್ಣ ಸಹಕಾರವಿದ್ದು, ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ ಎಂದರು.

ಅರಕಲಗೂಡು ತಾಲೂಕು ತೀರ ಬರ ಪೀಡಿತ ತಾಲೂಕುಗಳೆಂದು ಘೋಷಿಸಿದ್ದಾರೆ. ಬರಗಾಲ ಪೀಡಿತ ಪಟ್ಟಿಯಿಂದ ಕೈ ಬಿಟ್ಟಿರುವ ಆಲೂರು, ಅರಸೀಕೆರೆ ಹಾಗೂ ಹಾಸನ ತಾಲೂಕುಗಳನ್ನು ಕೂಡಲೇ ಬರ ಪೀಡಿತ ಎಂದು ಘೋಸಿಸಬೇಕು. ಮಲೆನಾಡಿನಲ್ಲೇ ಕಾಫಿ ಬೆಳೆಗೆ ನೀರಿಲ್ಲ. ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಜಿಲ್ಲೆಯ ಬಗ್ಗೆ ನಿರ್ಲಕ್ಷ್ಯ :

ಸ್ವಾತಂತ್ರ್ಯ ದಿನಾಚರಣೆ ದಿನ ಜಿಲ್ಲೆಗೆ ಬಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಜಿಲ್ಲೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಉಸ್ತುವಾರಿ ಸಚಿವರು ತುಮಕೂರಿಗೆ ಕಾವೇರಿ ನೀರು ಹರಿಸಲು ತೋರಿದ ಉತ್ಸಾಹ ತೋರಿದಷ್ಟು, ಜಿಲ್ಲೆಯ ಬಗ್ಗೆ ಕಾಳಜಿ ತೋರುತ್ತಿಲ್ಲ. ಮುಂದಿನ ದಿನಗಳಲ್ಲಿ ಹೇಮಾವತಿ ಜಲಾಶಯದಿಂದ ನೀರು ಹರಿಸಿದರೆ ಜೆಡಿಎಸ್ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ನಗರಸಭೆ ಸದಸ್ಯ ಅಕ್ಬರ್, ಜೆಡಿಎಸ್ ಮುಖಂಡರಾದ ಸುಮಾ, ಚಂದ್ರಿಕಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net