ಮಹಿಳಾ ಪೌರ ಕಾರ್ಮಿಕರಿಗೆ ಸೀರೆ ವಿತರಣೆ

04Rajesh3
Published on

ಚಾಮರಾಜನಗರ: ಪೌರಕಾರ್ಮಿಕರು ಸ್ವಚ್ಛತೆ ಮಾಡುವ ಮಹತ್ವದ ಕಾರ್ಯವನ್ನು ಹಗರು ರಾತ್ರಿ ಎನ್ನದೆ ದುಡಿಯುವ ವರ್ಗ ಎಂದು ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಆಲೂರು ಮಲ್ಲು ಹೇಳಿದರು.

ನಗರದ ಜಿಲ್ಲಾಡಳಿತದ ಮುಂಭಾಗ ಇರುವ ಖಾಸಗಿ ಸಭಾಂಗಣದಲ್ಲಿ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಮಹಿಳಾ ಪೌರಕಾರ್ಮಿಕರಿಗೆ ಸೀರೆ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೌರಕಾರ್ಮಿಕರಿಗೆ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನೂ ತಲುಪಿಸಬೇಕು. ಪೌಷ್ಠಿಕಾಂಶದಿಂದ ಕೂಡಿರುವ ಆಹಾರವನ್ನು ಒದಗಿಸಬೇಕು. ತ್ಯಾಜ್ಯವನ್ನು ತೆರವು ಮಾಡುವ ಕೆಲಸ ಸಣ್ಣದಲ್ಲ. ಇಂತಹ ಕೆಲಸ ಮಾಡುವವರಿಗೆ ಉದ್ಯೋಗ ಭದ್ರತೆ ಒದಗಿಸಲೇಬೇಕು ಎಂದು ಒತ್ತಾಯ ಮಾಡಿದರು.

ಕಲಾವೇದಿಕೆ ಅಧ್ಯಕ್ಷ ಎಚ್.ಎಂ.ಶಿವಣ್ಣ ಮಂಗಲ ಹೊಸೂರು ಮಾತನಾಡಿ, ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಪೌರಕಾರ್ಮಿಕರಿಗೆ ಸಂಘದ ವತಿಯಿಂದ ಸೀರೆ ವಿತರಣೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹಲವರ ಸಹಕಾರ ಪಡೆದು ಎಲ್ಲ ಮಹಿಳಾ ಪೌರಕಾರ್ಮಿಕರಿಗೂ ಸೀರೆ ವಿತರಣೆ ಮಾಡುತ್ತೇವೆ ಎಂದರು.

ಸಾಯಿ ಕರ್ಮಚಾರಿ ಆಯೋಗದ ಮಾಜಿ ಸದಸ್ಯ ಶಂಕರ್ ಸಿ.ಅಂಕನಶೆಟ್ಟಿಪುರ ಮಾತನಾಡಿ, ಕಲಾವೇದಿಕೆಯು ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಪೌರಕಾರ್ಮಿಕರ ಸೇವೆಯನ್ನು ಗುರುತಿಸಿ ಸೀರೆ ವಿತರಣೆ ಮಾಡುತ್ತಿದೆ. ಇದೇ ರೀತಿ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಕಲಾವೇದಿಕೆ ಮಾಡುತ್ತಿರಲಿ ಎಂದು ಹೇಳಿದರು.

ಪ್ರಗತಿಪರ ಹೋರಾಟಗಾರ ಬಸವನಪುರ ರಾಜಶೇಖರ್ ಮಾತನಾಡಿ, ಪಟ್ಟಣ, ವಿಶ್ವದೆಲ್ಲೆಡೆ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೌರಕಾರ್ಮಿಕರು ಸ್ವಚ್ಛತೆ ಕೆಲಸ ಮಾಡದೆ ಇದ್ದರೆ ತಿರುಗಾಡಲು ಆಗುವುದಿಲ್ಲ. ಅವರೊಂದಿಗೆ ಇತರರೆಲ್ಲರೂ ಸಹಬಾಳ್ವೆ ನಡೆಸಿದರೆ ಮಾತ್ರ ಸಮಾನತೆ ಬರಲಿದೆ ಎಂದು ತಿಳಿಸಿದರು.

ಇದೇ ವೇಳೆ ಕಲಾ ವೇದಿಕೆ ವತಿಯಿಂದ ಪೌರಕಾರ್ಮಿಕರಾದ ಲಕ್ಷ್ಮಿ, ಭಾಗ್ಯ, ರುಕ್ಮಿಣಿ, ಚಲ್ಲಮ್ಮ ಅವರಿಗೆ ಸೀರೆ ವಿತರಣೆ ಮಾಡಲಾಯಿತು. ಮುಖಂಡರಾದ ನಾಗಮಹದೇವ ಚಂದಕವಾಡಿ, ಸುಂದರ್, ರಂಗಸ್ವಾಮಿ, ವಸಂತ ಬಂಗಾರು, ಮುಗೂರು ಮೂರ್ತಿ, ಮಹದೇವಸ್ವಾಮಿ, ಸಿ.ಡಿ.ಪ್ರಕಾಶ್ ಮತ್ತು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net