

ತುಮಕೂರು : ನಗರದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 11ನೇ ತಂಡದ ನಾಗರಿಕ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಆಕರ್ಷಕವಾಗಿತ್ತು.
ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ತರಬೇತಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ.ಹರಿಶೇಖರನ್ ಭಾಗವಹಿಸಿ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಶುಭ ಹಾರೈಸಿದರು.
ಪೊಲೀಸ್ ಇಲಾಖೆಯಲ್ಲಿ ದಯೆ, ದಾಕ್ಷಿಣ್ಯವಿಲ್ಲದೆ ಕಾನೂನು ಪಾಲನೆ ಮಾಡಿದರೆ ನಿಸ್ವಾರ್ಥವಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ.ಹರಿಶೇಖರನ್ ತಿಳಿಸಿದರು. ಮಹಿಳಾ ಪೊಲೀಸರಿಗೆ ಸರ್ಕಾರ ವಿಶೇಷ ಸೌಲಭ್ಯವನ್ನು ನೀಡುವ ನಿಟ್ಟಿನಲ್ಲಿ ಸರ್ಕಾರದ ಜತೆ ಇಲಾಖೆ ಚರ್ಚಿಸುತ್ತಿದೆ. ಮುಂಬರುವ ದಿನಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರು ಉನ್ನತ ಸ್ಥಾನ ಅಲಂಕರಿಸಲಿದ್ದಾರೆ, ಶೇ.33 ಮೀಸಲಾತಿ ಕೂಡ ಲಭ್ಯವಾಗಲಿದೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಿದರೆ ಜನ, ಸಮುದಾಯ ಸ್ಮರಿಸುತ್ತದೆ. ಹಾಗಾಗಿ, ತರಬೇತಿ ಮುಗಿಸಿಕೊಂಡು ಕರ್ತವ್ಯಕ್ಕೆ ಹಾಜರಾಗುವ ಪ್ರಶಿಕ್ಷಣಾರ್ಥಿಗಳು ಸೇವಾ ಅವಧಿಯಲ್ಲಿ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಭಾರತ ಹಲವಾರು ಜಾತಿ, ಮತಗಳನ್ನು ಹೊಂದಿರುವ ದೇಶವಾಗಿದ್ದು, ಸಂವಿಧಾನದ ಮೂಲ ಆಶಯ ಕಾಪಾಡುವುದನ್ನು ಪೊಲೀಸರು ಮರೆಯಬಾರದು ಎಂದರು.
ಪ್ರಶಿಕ್ಷಣಾರ್ಥಿಗಳ ಪಾಲಕರು ಪಾಲ್ಗೊಂಡು ಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ ದೃಶ್ಯಗಳು ವಿಶೇಷ ಎನಿಸಿತು. ತರಬೇತಿ ಪೂರ್ಣಗೊಳಿಸಿ ಊರುಗಳಿಗೆ ತೆರಳುವಾಗ ಎಲ್ಲರೂ ಭಾವುಕರಾಗಿದ್ದರು. ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್‌ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹಾಗೂ ತರಬೇತಿ ಶಾಲೆಯ ಪ್ರಾಚಾರ್ಯ ಟಿ.ಜೆ ಉದೇಶ್, ಉಪಪ್ರಾಚಾರ್ಯ ಪರಮೇಶ್ ಇದ್ದರು.
ತಾರಾಮಣಿಗೆ ಸರ್ವೋತ್ತಮ ಪ್ರಶಸ್ತಿ : ತರಬೇತಿ ಅವಧಿಯಲ್ಲಿ ಒಳಾಂಗಣ, ಹೊರಾಂಗಣ ಹಾಗೂ ಗುರಿಗಾರ ಚಟುವಟಿಕೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪ್ರಶಿಕ್ಷಣಾರ್ಥಿ ಎಚ್.ಆರ್.ತಾರಾಮಣಿ ಸರ್ವೋತ್ತಮ ಪ್ರಶಸ್ತಿ ಪಡೆದರು. ಒಳಾಂಗಣ ಚಟುವಟಿಕೆಯಲ್ಲಿ ತಾರಾಮಣಿ (ಪ್ರಥಮ), ಬಿ.ಎಚ್.ಸುಷ್ಮಿತ (ದ್ವಿತೀಯ), ಕೆ.ಲಾವಣ್ಯ, ಆರ್.ರಾಜಶ್ರೀ, ಅನಿತಾ ಕೊನ್ನಾಪೂರ್ (ತೃತೀಯ) ಬಹುಮಾನ ಪಡೆದರು. ಹೊರಾಂಗಣದಲ್ಲಿ ಎಂ.ಎಸ್.ಮಧುಶ್ರೀ(ಪ್ರಥಮ), ಎಚ್.ಆರ್.ತಾರಾಮಣಿ (ದ್ವಿತೀಯ) ಹಾಗೂ ಸುಷ್ಮಿತ ಹಾಗೂ ಪೂಜಾ ತೃತೀಯ ಬಹುಮಾನ ಪಡೆದುಕೊಂಡರು. ಗುರಿಗಾರದಲ್ಲಿ ಉತ್ತಮ ಪ್ರದರ್ಶನ ನೀಡಿದ ಕೆ.ಎಸ್.ಮಧು(ಪ್ರಥಮ) ದೀಕ್ಷಿತಾ(ದ್ವಿತೀಯ) ಹಾಗೂ ರಮ್ಯಶ್ರೀ ತೃತೀಯ ಬಹುಮಾನ ಪಡೆದರು.
ರಾಜ್ಯದ ಹಲವರು ಭಾಗಿ : 2021ರ ಜೂ.26ರಂದು ತರಬೇತಿಗೆ ಹಾಜರಾಗಿದ್ದ ಕೋಲಾರ ಜಿಲ್ಲೆಯ 13, ಬೆಂಗಳೂರು ಗ್ರಾಮಾಂತರದ 12, ರೈಲ್ವೆ ಪೊಲೀಸ್ 10, ಬೆಂಗಳೂರು ಸಂಚಾರ ವಿಭಾಗ 18, ಗದಗ 8, ಬಳ್ಳಾರಿ 5, ಉಡುಪಿ 4, ಚಿತ್ರದುರ್ಗ 3, ಹುಬ್ಬಳ್ಳಿ-ಧಾರವಾಡ 3, ಶಿವಮೊಗ್ಗ 3, ಯಾದಗಿರಿ, ಮಂಡ್ಯ, ಚಿಕ್ಕಮಗಳೂರು, ಕೊಡಗು ಜಿಲ್ಲೆಯ ತಲಾ ಇಬ್ಬರು, ಬೆಂಗಳೂರು ನಗರ ಪಶ್ಚಿಮ, ಬೆಂಗಳೂರು, ಹಾಸನ, ಬಾಗಲಕೋಟೆ, ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ತಲಾ ಒಬ್ಬರು ರಾಜ್ಯದ ಒಟ್ಟು 19 ಜಿಲ್ಲೆಗಳ 93 ಮಹಿಳಾ ಪೊಲೀಸರು ತರಬೇತಿ ಪೂರ್ಣಗೊಳಿಸಿದರು.
ಇಂಜಿನಿಯರ್, ಪಿಜಿ, ಪದವೀಧರರು ಸೇವೆಗೆ : ಸೋಮವಾರ ತರಬೇತಿ ಪೂರ್ಣಗೊಳಿಸಿದ 93 ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ಪೈಕಿ ಒಬ್ಬರು ಇಂಜಿನಿಯರಿಂಗ್ ಪದವೀಧರೆ, 26 ಸ್ನಾತಕೋತ್ತರ ಪದವೀಧರರು ಹಾಗೂ 62 ಪದವೀಧರರು ಇದ್ದಾರೆ. ಈ ಪೈಕಿ ರಾಷ್ಟ್ರಮಟ್ಟದಲ್ಲಿ ಇಬ್ಬರು, ರಾಜ್ಯಮಟ್ಟದಲ್ಲಿ 4 ಜನ ವಿವಿ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದವರಾಗಿದ್ದಾರೆ.