

ಮೈಸೂರು: ಉತ್ತರಪ್ರದೇಶದಲ್ಲಿ ಮಹಿಳೆಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಘಟನೆ ಖಂಡಿಸಿ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಯಿತು.
ದೇವಸ್ಥಾನದಲ್ಲೇ 50 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡಿ ಹತ್ಯೆಗೈದ ಘಟನೆ ನಡೆದಿದ್ದು, ಅರ್ಚಕರ ಸಮೇತ ಮೂವರು ಈ ಕೃತ್ಯವೆಸಗಿದ್ದಾರೆ ಎಂಬುದು ವರದಿಯಾಗಿದೆ. ಧಾರ್ಮಿಕತೆಯ ಹೆಸರಿನಲ್ಲಿ ಮತ್ತು ಅದರ ಬಗ್ಗೆ ಹೆಮ್ಮೆ ಪಡುವ ಆಡಳಿತದಲ್ಲಿ ದೇವಾಲಯಗಳು ಅಪರಾಧ ತಾಣವಾಗುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ಕಿಡಿಕಾರಿದರು.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆಡಳಿತವನ್ನು ರಕ್ಷಿಸಲು ಸಲುವಾಗಿ ಪೊಲೀಸರು ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕಿರುವುದು ಖಂಡನೀಯ. ತಕ್ಷಣ ತಪ್ಪಿತಸ್ಥರಿಗೆ ಗರಿಷ್ಠಮಟ್ಟದ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ಡಾ.ರತಿರಾವ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.