

ಹಾಸನ: ಸಮಾಜ ಶೈಕ್ಷಣಿಕವಾಗಿ ಎಷ್ಟೇ ಪ್ರಗತಿ ಸಾಧಿಸಿದರೂ ಮಹಿಳೆರ ಮೇಲೆ ಆಗುತ್ತಿರುವ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಆಗುತ್ತಿಲ್ಲ. ಮಹಿಳೆ-ಪುರುಷ ಸಮಾನರು ಎಂಬ ಮನೋಭಾವ ಎಲ್ಲರಲ್ಲೂ ಮೂಡಬೇಕು. ಇದರ ಜೊತೆಗೆ ಕಾನೂನಿನ ಅರಿವು ಅಗತ್ಯವಾಗಿ ಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಟಿ.ಎನ್.ಇನವಹಳ್ಳಿ ಹೇಳಿದರು.
ನಗರ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಗೋಕುಲದಾಸ್ ಕಾರ್ಖಾನೆಯಲ್ಲಿ ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕುಟುಂಬ ಆರ್ಥಿಕವಾಗಿ ಸದೃಢವಾಗಬೇಕೆಂದರೆ ಪುರುಷ ಮತ್ತು ಸ್ತ್ರೀ ಇಬ್ಬರು ದುಡಿಯಬೇಕು. ತಾವು ಪುರುಷರಿಗಿಂತ ಕಡಿಮೆಯಿಲ್ಲ ಎಂಬುದನ್ನು ಸಾಬೀತುಪಡಿಸಬೇಕು. ಸ್ತ್ರೀಯರ ರಕ್ಷಣೆಗಾಗಿ ಇರುವ ಕಾನೂನುಗಳ ಕುರಿತು ಎಲ್ಲರಿಗೂ ಅರಿವು ಮೂಡಿಸಬೇಕು ಎಂದರು.
ವಕೀಲ ಗಿರಿಜಾಂಬಿಕಾ ಅವರು ಮಾತನಾಡಿ, ಮಹಿಳೆಯರು ಯಾವುದೇ ಕೈಗಾರಿಕೆಗಳಲ್ಲಿ ಮಹಿಳಾ ಸುರಕ್ಷತಾ ನಿಯಮಗಳನ್ನು ಅನುಸರಿಸುವುದು ಕಡ್ಡಾಯ. ಕರ್ತವ್ಯದ ಅವಧಿಯಲ್ಲಿ ಯಾರಿಂದಲಾದರೂ ದೌರ್ಜನ್ಯವಾದರೆ ಸಹಾಯವಾಣಿಗೆ ದೂರು ನೀಡಬಹುದು. ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ದಂತಹ ಸಮಸ್ಯೆಗಳು ಕಂಡುಬಂದರೆ ಯಾವುದೇ ಭಯವಿಲ್ಲದೇ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಸಲಹೆ ನೀಡಿದರು.
ಕಾರ್ಖಾನೆಯ ವ್ಯವಸ್ಥಾಪಕ ದರ್ಶನ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ.ರವಿಕಾಂತ್, ಅನುರುತ್ ಇತರರು ಇದ್ದರು.