

ಬೆಂಗಳೂರು: ಸಮಾಜದಲ್ಲಿ ಅಸಮಾನತೆ ನಿರ್ಮೂಲನೆಯಾಗದಿದ್ದರೆ ಉತ್ತಮ ಸಮಾಜ ನಿರ್ಮಾಣ ಅಸಾಧ್ಯ ಎಂದು ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರಮೀಳಾಮಹಾದೇವ್ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಗ್ರಾಪಂ ಜವಾಹರ್ ನವೋದಯ ವಿದ್ಯಾಲಯದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಸಮಾನವಾಗಿ ಕಾಣುವ ಮನೋಭಾವ ಬೆಳೆಯಬೇಕು. ಇಲ್ಲದಿದ್ದರೆ ಸಮಾಜ ಸುಧಾರಣೆ ಸಾಧ್ಯವಿಲ್ಲ ಎಂದರು.
ಮಹಿಳಾ ದಿನಾಚರಣೆ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು, ಆಚರಣೆಗೂ ಬರಬೇಕು. ನಿತ್ಯದ ಬದುಕಿನಲ್ಲಿ ಮಹಿಳೆಗೆ ಸಮಾನವಾಗಿ ಅವಕಾಶ ನೀಡಬೇಕು. ದಿನಾಚರಣೆಗಳ ಉದ್ದೇಶಗಳು ಸಾಕಾರವಾಗಬೇಕು ಎಂದರು.
ಭಾರತೀಯ ಸಂಸ್ಕೃತಿ ಪರಂಪರೆಗೆ ವಿಶ್ವದಲ್ಲೇ ವಿಶೇಷ ಸ್ಥಾನಮಾನವಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಮೌಲ್ಯಧಾರಿತ ಶಿಕ್ಷಣದ ಜತೆಗೆ ಉತ್ತಮ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪ್ರಾಂಶುಪಾಲ ಆರ್.ಚಕ್ರವರ್ತಿ ಹೇಳಿದರು.
ಅಭಿವೃದ್ಧಿಶೀಲ ದೇಶಗಳಲ್ಲಿ 4 ವರ್ಷ ವಯಸ್ಸಿನವರೆಗೆ ಮಕ್ಕಳಿಗೆ ಯಾವುದೇ ಪಠ್ಯಪುಸ್ತಕವಿಲ್ಲದ ಶಿಕ್ಷಣ ನೀಡಲಾಗುತ್ತದೆ. ಆದರೆ ಭಾರತದಲ್ಲಿ ಮಗು ಹುಟ್ಟಿದ ಒಂದೇ ವರ್ಷದಲ್ಲೇ ಶಾಲೆಗೆ ಸೇರಿಸಿ ಪಾಲಕರ ಪ್ರೀತಿ ಪೋಷಣೆಯಿಂದ ವಂಚಿತರನ್ನಾಗಿ ಮಾಡುವ ಪರಿಸ್ಥಿತಿ ಇದೆ ಎಂದರು.
ಪ್ರಾಧ್ಯಾಪಕ ಎನ್.ಜನಾರ್ದನ್ ಮಾತನಾಡಿ, ಆಧುನಿಕತೆಗೆ ತಕ್ಕಂತೆ ಸಮಾಜದಲ್ಲಿ ಅನೇಕ ಸಮಸ್ಯೆಗಳು ಉದ್ಭವವಾಗಿವೆ. ಸಣ್ಣ ವಯಸ್ಸಿನಲ್ಲೇ ದುಶ್ಚಟಗಳ ದಾಸರಾಗಿ ಭವಿಷ್ಯ ಮಂಕು ಮಾಡಿಕೊಳ್ಳುತ್ತಿದ್ದಾರೆ. ಪಾಲಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಕ್ಕಳು ದಾರಿ ತಪ್ಪಿದಾಗ ಬುದ್ದಿ ಹೇಳಿ ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು. ಕನ್ನಡ ವಿಭಾಗದ ವಿ.ಎಸ್ ಹೆಗ್ಗಡೆ ಮತ್ತಿತರರು ಪಾಲ್ಗೊಂಡಿದ್ದರು.