ಮಹಿಳಾ ದಿನ ಅರ್ಥಪೂರ್ಣ ಆಚರಣೆ: ವಿಜಯವಾಣಿ ಸಂವಾದದಲ್ಲಿ ಸಾಧಕಿಯರು ಹೇಳಿದ್ದೇನು ಗೊತ್ತಾ?

20210307_135113
Published on

ವಿಜಯಪುರ: ಮಹಿಳೆ ಮೌನ ಮುರಿಯಬೇಕು, ಮಾನಸಿಕವಾಗಿ ಬದಲಾಗಬೇಕು, ಪುರುಷರಿಗೆ ಸಮನಾಗಿ ನಿಲ್ಲಬೇಕು, ಬಾಲ್ಯದಿಂದಲೇ ಮಹಿಳಾ ಸಬಲೀಕರಣ ಕಾರ್ಯ ನಡೆಯಬೇಕು, ಪುರುಷ ಪ್ರಧಾನ ಭಾಷಾ ಬಳಕೆ ಬದಲಾಗಬೇಕು, ರಾಜಕೀಯವಾಗಿ ಮೀಸಲಾತಿ ಹೆಚ್ಚಿಸಬೇಕು, ಸಾಮಾಜಿಕವಾಗಿ ತಾರತಮ್ಯ ಹೋಗಲಾಡಿಸಬೇಕು..!

ಅಬ್ಬಾ ಒಂದಾ ಎರಡಾ? ಹೀಗೆ ಸಾಲು ಸಾಲು ಬೇಡಿಕೆಗಳು ಹಾಗೂ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಹಿಳಾ ಸಾಧಕಿಯರು ಬಿಚ್ಚಿಟ್ಟ ಸ್ವಾರಸ್ಯಕರ‌ ಸಂಗತಿಗಳು ನಿಜಕ್ಕೂ ಗಮನ ಸೆಳೆದವು.

ಇಲ್ಲಿನ ತನಿಷ್ಕಾ ಚಿನ್ನಾಭರಣ ಮಳಿಗೆಯ ಸಭಾಂಗಣದಲ್ಲಿ ಭಾನುವಾರ ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆ ಭಾನುವಾರ ಹಮ್ಮಿಕೊಂಡಿದ್ದ 'ವರ್ತಮಾನದಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳು' ಕುರಿತ ಸಂವಾದದಲ್ಲಿ ವಿಭಿನ್ನ ಹಾಗೂ ವಿಶಿಷ್ಟ ವಿಚಾರಧಾರೆಗಳು ಹೊರಹೊಮ್ಮಿದವು.

ಮಹಿಳೆಯರ ಸವಾಲುಗಳಿಗೆ ಅಂತ್ಯವೆಂಬುದಿಲ್ಲ. ಪ್ರತೀ ಕ್ಷಣವೂ ಮಹಿಳೆ ಸವಾಲುಗಳಿಗೆ ಎದೆಯೊಡ್ಡುತ್ತಾಳೆ. ನ್ಯಾಯಾಲಯಗಳೂ ಮಹಿಳೆಯರಿಗೆ ನ್ಯಾಯ ಒದಗಿಸದ ಸ್ಥಿತಿಗೆ ಬಂದಿವೆ ಎಂಬುದನ್ನು ಮಹಿಳಾ ವಿವಿ ಕುಲಸಚಿವರ ಆರ್. ಸುನಂದಮ್ಮ ಉದಾಹರಣೆ ಸಹಿತ ವಿವರಿಸಿದರು.

ಅಂಜುಮನ್ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಉಜ್ವಲಾ ಸರನಾಡಗೌಡ ಅವರು, ಬಾಲ್ಯದಲ್ಲಿಯೇ ಹೆಣ್ಣುಮಕ್ಕಳಿಗೆ ಆಗುತ್ತಿರುವ ತಾರತಮ್ಯ ಹೋಗಲಾಡಿಸಬೇಕು. ಸಮ ಸಮಾಜ ನಿರ್ಮಾಣವಾಗಬೇಕು. ಭಾಷೆ ಬಳಕೆಯಲ್ಲೂ ಹೆಚ್ಚಾಗಿ ಬಳಸಲ್ಪಡುವ ಪುರುಷ ಪ್ರಧಾನ ಪದಗಳನ್ನು ಬದಲಿಸಬೇಕೆಂದರು.

ಶೀಲಾ ಬಿರಾದಾರ ಅವರು ಮಹಿಳೆಯರು ಕಟ್ಟುಪಾಡುಗಳನ್ನು‌ ಮೀರಿ ಬೆಳೆಯಬೇಕೆಂದರು. ಸಹಕಾರಿ ಧುರೀಣೆ ಮೀನಾಕ್ಷಿ ಕಲ್ಲೂರ ಅವರು ಒಬ್ಬ ಅನಕ್ಷರಸ್ಥೆಯಾಗಿ ತಾವು ಸಹಕಾರಿ ರಂಗದಲ್ಲಿ ಸಾಧನೆಗೈದ ಬಗೆಯನ್ನು ಸ್ವಾರಸ್ಯಕರವಾಗಿ ವಿವರಿಸಿದರು. ಸುನಂದಾ ತೋಳಬಂದಿ ಅವರು, ಬಾಲ್ಯ ವಿವಾಹಗಳು, ಹೆಣ್ಣು

ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಅತ್ಯಂತ ಕಳಕಳಿ ವ್ಯಕ್ತಪಡಿಸಿದರು. ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಕಲಾವಿದೆ ದೀಪಶ್ರೀ, ಡಿಎಫ್ ಸರಿನಾ ಸಿಕ್ಕಲಗಾರ, ಅನಾಲಿಸಾ ಬಾಸ್ಕೋ, ಅಶ್ವಿನಿ ರೆಡ್ಡಿ, ಗೀತಾ ಪಾಟೀಲ ಹೀಗೆ ಅನೇಕ ಸಾಧಕಿಯರು ಮನದಾಳದ ನುಡಿಗಳನ್ನು ಹೊರಹಾಕಿದರು. ಪ್ರಾಯೋಜಕರಾದ ರಮೇಶ ಶಿರಾಡೋಣ, ವಿಜಯವಾಣಿ ಸ್ಥಾನಿಕ ಸಂಪಾದಕ‌ ಕೆ.ಎನ್. ರಮೇಶ ಮತ್ತಿತರರಿದ್ದರು. ಜ್ಞಾನ ಜ್ಯೋತಿ ಚಾಂದಕವಟೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net