ಮಹಿಳಾ ಜನ್​ಧನ್ ಖಾತೆಗಳಿಗೆ ನೇರ ನಗದು ವರ್ಗಾವಣೆ

deepa cholan
Published on

ಧಾರವಾಡ: ಕರೊನಾ ನಿಯಂತ್ರ ಣಕ್ಕಾಗಿ ಲಾಕ್​ಡೌನ್ ಘೊಷಿಸಿದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ, ಮಹಿಳೆಯರ ಜನ್​ಧನ್ ಖಾತೆಗಳಿಗೆ ತಲಾ 500 ರೂ. ನೇರ ನಗದು ಜಮೆ ಮಾಡುವ ಕಾರ್ಯ ಏ. 3ರಿಂದ ಜಿಲ್ಲೆಯಲ್ಲಿ ಪ್ರಾರಂಭವಾಗಲಿದೆ. ಜಿಲ್ಲೆಯಾದ್ಯಂತ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರಿಗೆ ಇದರಿಂದ ಪ್ರಯೋಜನ ದೊರೆಯಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಹಾಗೂ ಬ್ಯಾಂಕ್ ಮಿತ್ರ ಮೂಲಕ ಗ್ರಾಹಕರು ಸೌಲಭ್ಯ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು. ತಮ್ಮ ಕಚೇರಿಯ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ಮಟ್ಟದ ಬ್ಯಾಂಕರ್​ಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲ ಬ್ಯಾಂಕ್​ಗಳಲ್ಲಿ ಸಾಮಾಜಿಕ ಅಂತರ ಕಾಪಾಡಲು 1 ಮೀ. ಅಂತರದಲ್ಲಿ ಗುರುತು ಹಾಕಿ

ಗ್ರಾಹಕರಿಗೆ ಆರೋಗ್ಯದ ಅರಿವು ಮೂಡಿಸಬೇಕು. ಗ್ರಾಮೀಣ ಪ್ರದೇಶಗಳ ಬ್ಯಾಂಕ್​ಗಳು ಬ್ಯಾಂಕ್ ಮಿತ್ರರ ಮೂಲಕ ಗ್ರಾಹಕರಿಗೆ ನಗದು ವಿಲೇವಾರಿ ಮಾಡಬೇಕು. ಬ್ಯಾಂಕ್ ಮಿತ್ರರಿಗೆ ಅಧಿಕೃತ ಗುರುತಿನ ಕಾರ್ಡ್ ನೀಡಿ ಪೊಲೀಸರಿಗೆ ಮಾಹಿತಿ ಒದಗಿಸಬೇಕು. ನಗರ ಪ್ರದೇಶಗಳಲ್ಲಿ ಎಟಿಎಂಗಳ ಮೂಲಕ ಫಲಾನುಭವಿಗಳು ತಮ್ಮ ನಗದು ಪಡೆಯಬಹುದು ಎಂದರು.

ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎಂ. ಈಶ್ವರ ಮಾತನಾಡಿ, ಜಿಲ್ಲೆಯಲ್ಲಿ 5 ಲಕ್ಷಕ್ಕೂ ಅಧಿಕ ಮಹಿಳೆಯರು ಪಿಎಂಜೆಡಿವೈ ಖಾತೆ ಹೊಂದಿದ್ದಾರೆ. ಈ ಗ್ರಾಹಕರಿಗೆ ವಿವಿಧ ಬ್ಯಾಂಕ್​ಗಳ 348 ಶಾಖೆಗಳು ಹಾಗೂ 450 ಎಟಿಎಂಗಳ ಮೂಲಕ ಸೇವೆ ಒದಗಿಸಲಾಗುವುದು ಎಂದರು.

ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ ಹಾಗೂ ಜಿಲ್ಲೆಯ ವಿವಿಧ ಬ್ಯಾಂಕ್​ಗಳ ಅಧಿಕಾರಿಗಳು ಹಾಜರಿದ್ದರು.

ಸರಕು ಸಾಗಾಣಿಕೆ ಲಾರಿಗಳ ಸೇವೆ ಪುನಾರಂಭಕ್ಕೆ ಸೂಚನೆ: ಕರೊನಾ ತಡೆಯಲು ಘೊಷಿಸಿರುವ ಲಾಕ್​ಡೌನ್ ಅವಧಿಯಲ್ಲಿ ಜನಜೀವನಕ್ಕೆ ವ್ಯತ್ಯಯ ತಡೆಗೆ ಎಲ್ಲ ಬಗೆಯ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಖಾಸಗಿ ಟ್ರಾನ್ಸ್​ಪೋರ್ಟ್​ಗಳು ಹಾಗೂ ಲಾರಿ ಮಾಲೀಕರು ಸಾಮಾನ್ಯ ದಿನಗಳಿಗಿಂತ ಕಡಿಮೆ ಜನರನ್ನು ಬಳಸಿ ಸೇವೆ ಪುನರಾರಂಭಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದರು. ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಜರುಗಿದ ಲಾರಿ ಮಾಲೀಕರು, ವರ್ತಕರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಅಕ್ಕಿ, ಗೋದಿ, ಜೋಳ ಆಹಾರ ಧಾನ್ಯಗಳ ಪೂರೈಕೆ ನಿಲ್ಲಬಾರದು. ಸರಕು ಸೇವೆಯು ಮುಖ್ಯ. ಮುಂಬರುವ ದಿನಗಳಲ್ಲಿ ಸಮಸ್ಯೆಗಳಾಗಬಾರದು ಎಂಬ ಆಶಯದೊಂದಿಗೆ ಎಲ್ಲ ಬಗೆಯ ಸರಕು ಸಾಗಣೆ ಕನಿಷ್ಠ ಪ್ರಮಾಣದಲ್ಲಿಯಾದರೂ ಮುಂದುವರಿಯಲೇ ಬೇಕು. ಪಾರ್ಸೆಲ್ ಸೇವೆಗಳು ನಡೆಯಬೇಕು ಎಂದರು. ಲಾರಿ ಮಾಲೀಕರ ಸಂಘದ ಬೆಳಂಕರ್, ಗಯೂಬ್​ಖಾನ್ ಹೊನ್ನಳ್ಳಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಅಪ್ಪಯ್ಯ ನಾಲ್ವತ್ವಾಡಮಠ, ಸಿ.ಡಿ. ನಾಯಕ, ಇತರರು ಸಭೆಯಲ್ಲಿದ್ದರು.

ಉಚಿತ ಹಾಲು ವಿತರಣೆ ಇಂದಿನಿಂದ: ಕೊಳಚೆ ಪ್ರದೇಶಗಳ ನಾಗರಿಕರಿಗೆ ಉಚಿತವಾಗಿ ಹಾಲು ಪೂರೈಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿರುವ ಹಿನ್ನೆಲೆಯಲ್ಲಿ ಧಾರವಾಡ ಹಾಲು ಒಕ್ಕೂಟದಿಂದ ಏ. 3ರಿಂದ ಬಡ ಕುಟುಂಬಗಳಿಗೆ 25,000 ಲೀ. ಹಾಲನ್ನು ಉಚಿತವಾಗಿ ವಿತರಿಸಲು ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು. ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು. ಅವಳಿನಗರದಲ್ಲಿ 100 ಅಧಿಸೂಚಿತ ಕೊಳಚೆ ಪ್ರದೇಶಗಳಿವೆ ಅಲ್ಲಿ ಸುಮಾರು 32,745ಕ್ಕೂ ಹೆಚ್ಚು ಕುಟುಂಬಗಳಿವೆ. ಅಧಿಸೂಚಿತವಲ್ಲದ ಕೊಳಚೆ ಪ್ರದೇಶಗಳಲ್ಲಿ 5068ಕ್ಕೂ ಹೆಚ್ಚು ಕುಟುಂಬಗಳಿವೆ. ವಿವಿಧ ಇಟ್ಟಂಗಿ ಭಟ್ಟಿಗಳಲ್ಲಿ ಸುಮಾರು 3,348 ಕುಟುಂಬಗಳಿವೆ. ಜಿಲ್ಲೆಯಲ್ಲಿ ಸದ್ಯ ಸುಮಾರು 400 ವಲಸೆ ಕಾರ್ವಿುಕರಿಗೆ ವಿವಿಧ ಹಾಸ್ಟೆಲ್​ಗಳಲ್ಲಿ ವಸತಿ ಕಲ್ಪಿಸಲಾಗಿದೆ. ಅವರೆಲ್ಲರಿಗೂ ಉಚಿತವಾಗಿ ಹಾಲು ಪೂರೈಸಬೇಕು. ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳು, ಕೆಎಂಎಫ್, ಸಮಾಜ ಕಲ್ಯಾಣ, ಕಾರ್ವಿುಕ ಇಲಾಖೆಯ ಅಧಿಕಾರಿಗಳು ಈ ಕಾರ್ಯ ನಿರ್ವಹಿಸಬೇಕು ಎಂದರು. ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಕೆಎಂಎಫ್ ಜಂಟಿ ನಿರ್ದೇಶಕ ಡಿ.ಟಿ. ಕಳಸದ, ಎ.ಎಸ್. ಬಬಲೇಶ್ವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net