

ಧಾರವಾಡ: ‘ಮಮ್ಮೀ... ಎಲ್ಲರ ಸಮವಸ್ತ್ರಕ್ಕೂ ಸ್ಟಾರ್ ಇವೆ. ನಿನಗೇಕೆ ಇಲ್ಲ?’ ಎಂದು ಮಗಳು ಆಗಾಗ ಕೇಳುತ್ತಿದ್ದಳು. ‘ನನ್ನ ಸಮವಸ್ತ್ರಕ್ಕೂ ಸ್ಟಾರ್ ಬರುತ್ತವೆ ಮಗಳೇ’... ಎಂದು ಮಹಿಳೆ ತನ್ನ ಮಗಳಿಗೆ ಹೇಳುತ್ತಿದ್ದಳು. ಮಗಳ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದ್ದು ಆ ಮಹಿಳಾ ಪೊಲೀಸ್ ಕಾನ್ಸ್ಟೇಬಲ್, ಸತತ ಪರಿಶ್ರಮ ಹಾಗೂ ಶ್ರದ್ಧೆಯಿಂದ ಓದಿ ಪಿಎಸ್ಐ ಆಗಿ ಆಯ್ಕೆಯಾಗಿದ್ದಾರೆ!
ಆ ಸಾಧಕ ಮಹಿಳೆಯ ಹೆಸರು ಭಾರತಿ ಕುರಿ. ನಗರದ ಶಹರ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿದ್ದ ಅವರೀಗ ಪಿಎಸ್ಐ ಆಗಿ ನೇಮಕಗೊಂಡಿದ್ದಾರೆ.
ಬೆಳಗಾವಿ ಜಿಲ್ಲೆ ಹಾರೂಗೇರಿಯ ಭಾರತಿ, ಪಿಯುಸಿ ನಂತರ ಮದುವೆಯಾದರು. ಓದು ನಿಲ್ಲಿಸದೆ ಹಾರೂಗೇರಿಯಲ್ಲೇ ಪದವಿ ಓದಿದರು. 2016ರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಅಷ್ಟೊತ್ತಿಗೆ ಬಿ.ಎಡ್, ಸಮಾಜಶಾಸ್ತ್ರ ಎಂಎ ಪದವಿ ಕೂಡ ಪಡೆದಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿರಂತರ ಓದಿದ ಪರಿಣಾಮ 2016ರಲ್ಲಿ ಹು-ಧಾ ಪೊಲೀಸ್ ಕಮೀಷನರೇಟ್ಗೆ ಮಹಿಳಾ ಪೊಲೀಸ್ ಪೇದೆಯಾಗಿ ನೇಮಕಗೊಂಡರು. ತರಬೇತಿ ನಂತರ ಶಹರ ಠಾಣೆಗೆ ನಿಯುಕ್ತಿಗೊಂಡಿದ್ದಾರೆ.
ಆಗಾಗ ಠಾಣೆಗೆ ಹೋಗುತ್ತಿದ್ದ ಅವರ ಮಗಳು ಶ್ರಾವಣಿ, ಸಮವಸ್ತ್ರಕ್ಕೆ ಸ್ಟಾರ್ಗಳಿಲ್ಲ ಏಕೆ ಎಂದು ಕೇಳುತ್ತಿದ್ದಳು. ಮಗಳ ಆಸೆ ಈಗ ಈಡೇರಿದೆ ಎಂದು ಭಾರತಿ ಪ್ರತಿಕ್ರಿಯಿಸಿದರು.
2019ರಲ್ಲಿ ಪಿಎಎಸ್ಐ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. 5 ವರ್ಷ ಪೂರ್ಣಗೊಳ್ಳದ ಕಾರಣ ಭಾರತಿ ಅವರಿಗೆ ಇನ್ಸರ್ವೀಸ್ ಮೀಸಲಾತಿ ಇರಲಿಲ್ಲ. ಹೀಗಾಗಿ ಪದವೀಧರರಿಗೆ ಸ್ಪರ್ಧೆಯೊಡ್ಡಿ, ಯಶಸ್ಸು ಗಳಿಸಿದ್ದಾರೆ!. ಭಾರತಿ ನೇಮಕಕ್ಕೂ ಮೊದಲೇ ಅವರ ಸಹೋದರಿ ಬೆಂಗಳೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದರು. ಹಾಗಾಗಿ ಇವರೂ ಪ್ರಯತ್ನ ಮಾಡಿ ಪೊಲೀಸ್ ಆದರು. ಈಗ ಪಿಸಿಯಿಂದ ಪಿಎಸ್ಐ ಹುದ್ದೆಗೆ ಜಿಗಿದಿದ್ದಾರೆ. ತಂದೆ- ತಾಯಿ ಕೃಷಿಕರು. ಪತಿ ಖಾಸಗಿ ನೌಕರಿ ಮಾಡಿಕೊಂಡಿದ್ದು, ಸಹೋದರ ಭಾರತೀಯ ಸೇನೆಯಲ್ಲಿದ್ದಾನೆ. ಗೃಹಿಣಿಯಾಗಿ, 7 ವರ್ಷದ ಮಗಳಿದ್ದರೂ ನಿರಂತರ ಓದಿಗೆ ಕುಟುಂಬದವರೆಲ್ಲರ ಸಹಕಾರ ದೊರೆಯಿತು. ಇಲ್ಲಿಗೆ ಓದು ನಿಲ್ಲಿಸಿದೆ ಕೆಎಎಸ್ ತೇರ್ಗಡೆಯಾಗಿ ಎಸಿಪಿಯಾಗಬೇಕು ಎಂಬ ಆಸೆಯಿದೆ ಎಂದು ಭಾರತಿ ಅನಿಸಿಕೆ ಹಂಚಿಕೊಂಡರು.
EndFragment