

ಬೀದರ್: ಮಹಿಳಾ ಉದ್ಯಮಿಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸಬೇಕು ಎಂದು ಕೆ.ರತ್ನಪ್ರಭಾ ಮಹಿಳಾ ಪ್ರೇರಣಾ ಫೋರಂ ಅಧ್ಯಕ್ಷೆ ರತ್ನಪ್ರಭಾ ಪಾಟೀಲ್ ಮನವಿ ಮಾಡಿದರು.
ಬೆಂಗಳೂರಿನಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿ, ಮಹಿಳಾ ನೇತೃತ್ವದಲ್ಲಿ ನಡೆಯುವ ಉದ್ಯಮ ಯಶಸ್ವಿಯಾಗುತ್ತವೆ. ಹೀಗಾಗಿ ಸರ್ಕಾರ ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ನೆರವು ನೀಡಲು ಕೋರಿದರು.
ಮಹಿಳಾ ಉದ್ಯಮಿಗಳಿಗೆ ತರಬೇತಿ ನೀಡಲು ಪ್ರತಿ ಜಿಲ್ಲೆಗೆ ತಲಾ 1 ಲಕ್ಷ ರೂ. ನೀಡಲಾಗುವುದು. ಉದ್ಯಮ ಆರಂಭಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದರು.
ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ ಅಧ್ಯಕ್ಷೆ, ಮಹಿಳಾ ಉದ್ಯಮಿಗಳ ಸಂಘಗಳ ಒಕ್ಕೂಟದ ಅಧ್ಯಕ್ಷೆ ಕೆ. ರತ್ನಪ್ರಭಾ ಮಾತನಾಡಿ, 26 ಮಹಿಳಾ ಸಂಘಗಳಿಂದ ಒಕ್ಕೂಟ ಸ್ಥಾಪಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ನೆರವು ನೀಡಿದರೆ ಸರ್ಕಾರ ಮಾಡಬೇಕಿದ್ದ ಬಹುತೇಕ ಕೆಲಸವನ್ನು ಒಕ್ಕೂಟವೇ ಮಾಡುತ್ತದೆ ಎಂದು ಹೇಳಿದರು.
ಬೀದರ್ ನಲ್ಲಿ ಮಹಿಳಾ ಪಾಕ್೯ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಇಲ್ಲಿ ಮಹಿಳೆಯರಿಗೆ ಕಂಪ್ಯೂಟರ್, ಹೊಲಿಗೆ ಸೇರಿ ವಿವಿಧ ತರಬೇತಿ ನೀಡಿ ಉದ್ಯಮ ಕ್ಷೇತ್ರದ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ಈ ವೇಳೆ ಸಿಎಂ ಅವರಿಗೆ ಸ್ವಾದ ನಂದಿನಿ ಸಿದ್ಧಪಡಿಸಿದ ಸಿರಿಧಾನ್ಯ ರೊಟ್ಟಿ ಹಾಗೂ ಇತರೆ ಖಾದ್ಯಗಳನ್ನು ನೀಡಲಾಯಿತು. ಬಲಭೀಮ, ಮಯೂರಿ ಇತರರಿದ್ದರು.