ಮಹಿಳಾ ಆಟೋ ಚಾಲಕಿಯರ ಸಂಖ್ಯೆ ಹೆಚ್ಚಾಗಲಿ: ಶಾಸಕ ಎಸ್.ಸುರೇಶ್ ಕುಮಾರ್ ಆಶಯ

Sub_Suresh kumar
Published on

ಬೆಂಗಳೂರು: ಮಹಿಳಾ ಆಟೋ ಚಾಲಕಿರ ಸಂಖ್ಯೆ ಹೆಚ್ಚಾದರೆ,ನಗರದಲ್ಲಿರುವ ಮಹಿಳೆಯರು ಇನ್ನಷ್ಟು ಸುರಕ್ಷಿತವಾಗಿ ಆಟೋ ಸಂಚಾರ ಮಾಡಲು ಮುಂದಾಗುತ್ತಾರೆ ಎಂದು ಶಾಸಕ ಎಸ್. ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಬಿ.ಪ್ಯಾಕ್ ಹಾಗೂ ಆದರ್ಶ ಆಟೋ ಸಹಯೋಗದಲ್ಲಿ ಮಹಿಳೆಯರಿಗೆ ಉಚಿತ ಆಟೋ ಚಾಲನಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಗರದಲ್ಲಿ ಆಟೋ ಬಳಸುವವರ ಪೈಕಿ ಮಹಿಳೆಯರೇ ಹೆಚ್ಚು. ಆದರೆ, ಕೆಲವೊಂದು ಸಂದರ್ಭದಲ್ಲಿ ಮಹಿಳೆಯರ ಮೇಲೆ ಕಿರುಕುಳದಂತ ಸುದ್ದಿ ಕೇಳಿಬರುತ್ತವೆ. ಮಹಿಳೆಯರೇ ಆಟೋ ಚಾಲನೆಗೆ ಇಳಿದರೆ, ಇತರೆ ಮಹಿಳೆಯರು ಮತ್ತು ಮಕ್ಕಳು ಹೆಚ್ಚು ಸುರಕ್ಷಿತವಾಗಿ ಹಾಗೂ ಧೈರ್ಯವಾಗಿ ಯಾವ ಸಂದರ್ಭದಲ್ಲಾದರೂ ಆಟೋದಲ್ಲಿ ಸಂಚಾರ ಮಾಡಲು ಮುಂದಾಗುತ್ತಾರೆ. ಹೀಗಾಗಿ ಮಹಿಳೆಯರು ಹೆಚ್ಚು ಹೆಚ್ಚು ಆಟೋ ಚಾಲನಾ ವೃತ್ತಿಗೆ ಆಗಮಿಸಲಿ. ಇದರಿಂದ ಮಹಿಳೆಯರು ಆರ್ಥಿಕವಾಗಿಯೂ ಸಬಲೀಕರಣರಾಗಲಿದ್ದಾರೆ ಎಂದು ಹೇಳಿದರು.

ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಿದ್ದಾರೆ. ಆಟೋ ಚಾಲನೆಯಲ್ಲೂ ಯಾರಿಗೇನು ಕಡಿಮೆ ಇಲ್ಲದಂತೆ ಮುಂದಾಗುತ್ತಿರುವುದು ಅಭಿನಂದನಾರ್ಹ. ಆಸಕ್ತ ಮಹಿಳೆಯರಿಗೆ ಉಚಿತವಾಗಿ ತರಬೇತಿ ನೀಡುವಂತಹ ಕೆಲಸ ಮಾಡುತ್ತಿರುವ ಬಿ.ಪ್ಯಾಕ್ ಮತ್ತು ಆದರ್ಶ ಆಟೋ ಸಂಸ್ಥೆಯ ಕೆಲಸ ಶ್ಲಾಘಿಸುತ್ತೇನೆ. ಈ ಉಚಿತ ತರಬೇತಿ ಕಾರ್ಯಕ್ರಮ ಇತರೆ ಭಾಗಗಲ್ಲೂ ಪ್ರಾರಂಭಿಸಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿ.ಪ್ಯಾಕ್ ಸದಸ್ಯ ಮಿಮಿ ಪಾರ್ಥಸಾರಥಿ, ಅನಿಶಾ ಭಂಡಾರಿ, ಡಾ.ಸಂಪತ್, ರಾಘವೇಂದ್ರ ಪೂಜಾರಿ, ದೇವಿಕಾ ರಾಜ್ ಹಾಗೂ ತರಬೇತಿದಾರರದ ಪ್ರಭಾವತಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net