ಚಾಮರಾಜನಗರ: ರಾಜ್ಯ ಸರ್ಕಾರ ಈ ಬಾರಿ ಚಾಮರಾಜನಗರ ದಸರಾ ಆಚರಣೆಗೆ ಮುಂದಾಗದ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಹಾಗೂ ಕಲಾವಿದರು ಸೇರಿ ಸೋಮವಾರ ದಸರಾ ಆಚರಣೆಗೆ ಚಾಲನೆ ನೀಡಿದರು. ನಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ನಗರದ ಶ್ರೀ ಚಾಮರಾಜೇಶ್ವರಸ್ವಾಮಿ ದೇವಾಲಯದಲ್ಲಿ ಕಲಾವಿದರು ಹಾಗೂ ವಿವಿಧ ಸಂಘಟನೆಗಳ ಹೋರಾಟಗಾರರು ಶ್ರೀ ಚಾಮರಾಜೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಂಜೆ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ಉದ್ಯಾನವನ ಆವರಣದಲ್ಲಿರುವ ಭುವನೇಶ್ವರಿ ದೇವಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಚಾಮರಾಜೇಶ್ವರ ಸ್ವಾಮಿ ನಾದಸ್ವರ ತಂಡದಿಂದ ನಾದಸ್ವರ ಕಾರ್ಯಕ್ರಮ ಹಾಗೂ ಜಾನಪದ ಕಲಾವಿದ ರವಿಚಂದ್ರ ಪ್ರಸಾದ್ ಅವರಿಂದ ಕಹಳೆ ನುಡಿಸಿ, ರಾಜಮುದ್ರೆ ಪ್ರದರ್ಶನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜಾನಪದ ಕಲಾವಿದರ ಕೊಡುಗೆ ಅಪಾರ:
ಚಾಮರಾಜನಗರದ ಇತಿಹಾಸ ಪರಂಪರೆ ಉಳಿಯಲು ಜಿಲ್ಲೆಯ ಕಲಾವಿದರ ಕೊಡುಗೆ ಅಪಾರ ಎಂದು ಹಿರಿಯ ದಲಿತ ಮುಖಂಡ ವೆಂಕಟರಮಣಸ್ವಾಮಿ(ಪಾಪು) ಹೇಳಿದರು. ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಇತಿಹಾಸ, ಪರಂಪರೆ ಉಳಿಯಲು ಜಿಲ್ಲೆಯ ಕಲಾವಿದರ ಕೊಡುಗೆ ಅಪಾರವಾಗಿದೆ. ಜಿಲ್ಲೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿದೆ ಎಂದರೆ ಅದಕ್ಕೆ ಕಾರಣ ಜಿಲ್ಲೆಯ ಕಲಾವಿದರು. ಜಾನಪದ ವಿಚಾರ ಬಂದರೆ ಮೊದಲಿಗೆ ನೆನಪಾಗುವುದು ಚಾಮರಾಜನಗರ ಎಂದು ಹೇಳಿದರು.
ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡಿ, ಇಲ್ಲಿನ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕಿತ್ತು. ನಗರದಲ್ಲಿ ಜಾನಪದ ಕಲಾವಿದರು ಹಾಗೂ ಕನ್ನಡಪರ ಸಂಘಟನೆಗಳು ಸೇರಿ 9 ದಿನಗಳ ಕಾಲ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿ ಸರ್ಕಾರದ ಗಮನ ಸೆಳೆಯಬೇಕು. ಸಾಧ್ಯವಾದರೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಥವಾ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದು ತಿಳಿಸಿದರು.
ಹಿರಿಯ ರಂಗಕರ್ಮಿ ಕೆ.ವೆಂಕಟರಾಜು, ಜಾನಪದ ಕಲಾವಿದ ದೊಡ್ಡಗವಿ ಬಸಪ್ಪ, ಮಿಮಿಕ್ರಿ ಮಲ್ಲಣ್ಣ, ಮಂಗಲ ಶಿವಣ್ಣ, ಜಗ್ಗು ಜಾದುಗಾರ ಸುರೇಶ್ ನಾಗ್, ಉಮ್ಮತ್ತೂರು ಚಂದ್ರು, ಬಸವಣ್ಣ, ರಾಜಣ್ಣ, ಕಹಳೆ ರವಿಚಂದ್ರ ಪ್ರಸಾದ್, ಕಲಾವಿದರಾದ ಚಿನ್ನಮ್ಮ, ಹೊನ್ನಮ್ಮ, ಭಾಗ್ಯಮ್ಮ, ಮಹದೇವಮ್ಮ, ಚಿಕ್ಕ ತಾಯಮ್ಮ, ಉದ್ಯಮಿ ಶ್ರೀನಿಧಿ ಕುದರ್, ಸುರೇಶ್ ನಾಯಕ್, ಗಣೇಶ ದೀಕ್ಷಿತ್, ಜಗದೀಶ್, ರಾಜಗೋಪಾಲ್, ಶಿವು, ಜಿ.ಬಂಗಾರು, ಪುಣ್ಯದುಂಡಿ ರಾಜು ಉಪಸ್ಥಿತರಿದರು.
ಗಮನಸೆಳೆದ ಕಾರ್ಯಕ್ರಮಗಳು ತಂಬೂರಿ ಕಲಾವಿದ ದೊಡ್ಡಗವಿ ಬಸಪ್ಪ ತಂಡದವರಿಂದ ಜನಪದ ಗೀತೆಗಳ ಗಾಯನ, ಶ್ರೀ ಶಾರದಾ ಭಜನಾ ತಂಡದವರಿಂದ ಭಜನೆ, ಶ್ರೀ ಕಾಳಿಕಾಂಬ ಭಜನಾ ಮಂಡಳಿಯಿಂದ ಭಜನೆ, ಶ್ರೀ ಅಕ್ಷತಾ ಜೈನ್ ತಂಡದವರಿಂದ ಭರತನಾಟ್ಯ, ಅಪ್ಪು ಮೆಲೋಡಿಸ ತಂಡದವರಿಂದ ಚಲನಚಿತ್ರ ಗೀತೆಗಳ ಗಾಯನ ನಡೆದವು.
ಜಿಲ್ಲೆಯ ಕನ್ನಡಪರ ಸಂಘಟನೆಗಳು ಹಾಗೂ ಕಲಾವಿದರು ಸೇರಿ ದಸರಾ ಆಚರಣೆ ಪರಂಪರೆ ಮುಂದುವರಿಸಬೇಕು ಎಂಬ ಉದ್ದೇಶದಿಂದ 9 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಚಾ.ರಂ.ಶ್ರೀನಿವಾಸ್ ಗೌಡ, ಹೋರಾಟಗಾರ, ಚಾಮರಾಜನಗರ