ಮಹಾಸಭಾಕ್ಕೆ ಶಾಮನೂರು ಸರ್ಟಿಫಿಕೆಟ್ ಬೇಕಿಲ್ಲ

Basavaraj Dhannur
Published on

ಬೀದರ್: ಜಾಗತಿಕ ಲಿಂಗಾಯತ ಮಹಾಸಭಾ ಏನೆಂಬುದು ಎಲ್ಲರಿಗೂ ಗೊತ್ತಿದೆ. ಅದಕ್ಕೆ ಶಾಮನೂರು ಶಿವಶಂಕರಪ್ಪ ಅವರ ಸರ್ಟಿಫಿಕೆಟ್ ಬೇಕಿಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿ ಉಪಾಧ್ಯಕ್ಷ ಬಸವರಾಜ ಧನ್ನೂರು ಹೇಳಿದ್ದಾರೆ.
ಶಿವಶಂಕರಪ್ಪ ಅವರು ಜಾಗತಿಕ ಲಿಂಗಾಯತ ಮಹಾಸಭಾ ಎಲ್ಲಿದೆ, ಎಸ್.ಎಂ. ಜಾಮದಾರ್ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ವ್ಯಂಗ್ಯವಾಡಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.
ಜಾಗತಿಕ ಲಿಂಗಾಯತ ಮಹಾಸಭಾ ಹುಟ್ಟಿಕೊಂಡಿದ್ದು ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹಾಗೂ ಅಲ್ಪಸಂಖ್ಯಾತರ ಸ್ಥಾನಮಾನದ ಹೋರಾಟಕ್ಕಾಗಿ. ಭಾರತವೂ ಸೇರಿದಂತೆ 17 ದೇಶಗಳಲ್ಲಿ ಇದರ ಘಟಕಗಳು ಇವೆ. ದಾವಣಗೆರೆ ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳು ಇವೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರು ಹಾಗೂ ಪ್ರತಿಷ್ಠಿತ ಮಠಾಧೀಶರು ಇದನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಐದೇ ವರ್ಷಗಳಲ್ಲಿ 25 ಸಾವಿರ ಸದಸ್ಯರನ್ನು ಹೊಂದಿದ ಹಿರಿಮೆ ಜಾಗತಿಕ ಲಿಂಗಾಯತ ಮಹಾಸಭಾಕ್ಕೆ ಇದೆ. ನೂರು ವರ್ಷಗಳ ಇತಿಹಾಸದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಕ್ಕೆ ಎಷ್ಟು ಸದಸ್ಯರು ಇದ್ದಾರೆ ಎನ್ನುವುದನ್ನು ಶಿವಶಂಕರಪ್ಪ ಅವರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದಾವಣಗೆರೆಯಲ್ಲಿ ಅಧಿವೇಶನ ನಡೆಸುವುದಾಗಿ ಘೋಷಿಸಿ, ಕೊನೆ ಗಳಿಗೆಯಲ್ಲಿ ಹಿಂದಕ್ಕೆ ಸರಿದಿದ್ದೇಕೆ?, ಚುನಾವಣೆ ನೆಪ ಹೇಳಿ ಅಧಿವೇಶನದಿಂದ ತಪ್ಪಿಸಿಕೊಳ್ಳಲಾಗಿದೆ. ಕೇವಲ ಹಣ ಹಾಗೂ ಅಧಿಕಾರ ಇದ್ದರೆ ಸಾಲದು. ಕಾರ್ಯಕ್ರಮ ಸಂಘಟನೆಗೆ ಜನ ಬೆಂಬಲ ಇರಬೇಕಾಗುತ್ತದೆ. ಜನರ ವಿಶ್ವಾಸ ಕಳೆದುಕೊಂಡಿರುವುದರಿಂದಲೇ ಮಹಾಸಭಾಕ್ಕೆ ಕಾರ್ಯಕ್ರಮ ಸಂಘಟಿಸಲು ಆಗಿಲ್ಲ ಎಂದು ತಿಳಿಸಿದ್ದಾರೆ.
ಜಾಗತಿಕ ಲಿಂಗಾಯತ ಮಹಾಸಭಾ ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆಯಾಗಿ ಶರವೇಗದಲ್ಲಿ ಬೆಳೆಯುತ್ತಿರುವುದನ್ನು ಅರಗಿಸಿಕೊಳ್ಳಲಾಗದೆ, ಹತಾಶೆಯಿಂದ ಧರ್ಮದ ಬಗ್ಗೆ ಅಜ್ಞಾನ ಹಾಗೂ ನಿಷ್ಕಾಳಜಿ ಹೊಂದಿರುವ ಶಾಮನೂರು ಅವರು ಕ್ಷುಲ್ಲಕ ಹೇಳಿಕೆ ಕೊಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತರಲು ಹಾಗೂ ಲಿಂಗಾಯತರನ್ನು ಒಗ್ಗೂಡಿಸಲು ಜಾಗತಿಕ ಲಿಂಗಾಯತ ಮಹಾಸಭಾ ಬಸವಕಲ್ಯಾಣದಲ್ಲಿ ನಡೆಸಿದ ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಾ ಅಧಿವೇಶನದಲ್ಲಿ ಲಕ್ಷಾಂತರ ಜನ ಪಾಲ್ಗೊಂಡಿದ್ದರು. ದೇಶದ 200 ಮಠಾಧೀಶರು ಭಾಗವಹಿಸಿದ್ದರು. ಇದು, ಶಾಮನೂರು ಅವರ ಗಮನಕ್ಕೆ ಬರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಮಾನ್ಯತೆಯ ಸುವರ್ಣ ಅವಕಾಶ ತಪ್ಪಿಸಿದ್ದು ಹಾಗೂ ಸಮಾಜಕ್ಕೆ ದ್ರೋಹ ಬಗೆದದ್ದೇ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಡುಗೆಯಾಗಿದೆ ಎಂದು ಟೀಕಿಸಿದ್ದಾರೆ.
ಶಾಮನೂರು ಒಬ್ಬರು ವ್ಯಾಪಾರಿ ಹಾಗೂ ರಾಜಕಾರಣಿ ಮಾತ್ರ ಇದ್ದಾರೆ. ಅವರಿಗೆ ಸಮಾಜ ಹಾಗೂ ಧರ್ಮದ ಬಗ್ಗೆ ಕಿಂಚಿತ್ತೂ ಅರಿವಿಲ್ಲ. ಮಹಾಸಭಾವನ್ನು ತಮ್ಮ ವೈಯಕ್ತಿಕ ಹಾಗೂ ರಾಜಕೀಯ ಬೆಳವಣಿಗೆಗೆ ಬಳಸಿಕೊಂಡಿದ್ದಾರೆ. ಹಣ ಹಾಗೂ ಅಧಿಕಾರದ ಮದದಿಂದ ಅಸಂಬದ್ಧ ಮಾತುಗಳನ್ನಾಡುವುದು, ಬೇರೆಯವರನ್ನು ಕೀಳಾಗಿ ಕಾಣುವುದು ಹಾಗೂ ಹೀಯ್ಯಾಳಿಸುವುದು ಅವರಿಗೆ ರೂಢಿಯಾದಂತಿದೆ ಎಂದು ಹೇಳಿದ್ದಾರೆ.
ಲಿಂಗಾಯತ ಧರ್ಮದ ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎನ್ನುವ ತತ್ವವನ್ನು ಶಾಮನೂರು ತಿಳಿದುಕೊಂಡಿಲ್ಲ. 93ನೇ ವಯಸ್ಸಿನಲ್ಲಿ ಏನೇನೋ ಮಾತನಾಡುತ್ತಿದ್ದಾರೆ. ಅವರ ಹೇಳಿಕೆಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು ಎಂದು ಹೇಳಿದ್ದಾರೆ.
ಐಎಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ, ನಿವೃತ್ತರಾದ ಎಸ್.ಎಂ. ಜಾಮದಾರ್ ರಾಜ್ಯದಾದ್ಯಂತ ಜನ ಮನ್ನಣೆ ಗಳಿಸಿದ್ದಾರೆ. ಅವರ ಪ್ರಾಮಾಣಿಕತೆ, ಸಾಮಾಜಿಕ ಕಳಕಳಿ ಹಾಗೂ ಧರ್ಮ ನಿಷ್ಠೆ ಅನುಕರಣೀಯವಾಗಿದೆ. ಸಮಾಜಕ್ಕೆ ಅವರು ಮಾಣಿಕ್ಯದಂತಿದ್ದಾರೆ. ಲಿಂಗಾಯತರ ಎರಡು ಪವಿತ್ರ ಧಾರ್ಮಿಕ ಕ್ಷೇತ್ರಗಳಾದ ಬಸವಕಲ್ಯಾಣ ಹಾಗೂ ಕೂಡಲ ಸಂಗಮ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದೆ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ಕೊಡಿಸುವುದಕ್ಕಾಗಿ ಅವರು ಹೋರಾಟ ನಡೆಸುತ್ತಿದ್ದಾರೆ. ಅವರ ಬಗ್ಗೆ ಶಾಮನೂರು ಆಡಿರುವ ಮಾತುಗಳು ಹಾಸ್ಯಾಸ್ಪದ. ಇದು, ಅವರಿಗೆ ಶೋಭೆ ತರುವಂಥದ್ದಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net