ಮಹಾಶಿವರಾತ್ರಿ ಆಚರಣೆಗೆ ಸಕಲ ಸಿದ್ಧತೆ

02
Published on

ರಾಮದುರ್ಗ: ಪಟ್ಟಣದ ಹೊರ ವಲಯದ ರಾಮೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಫೆ.26ರಂದು 8ನೇ ವರ್ಷದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶಿವರಾತ್ರಿ ಜಾಗರಣೆ ಕಾರ್ಯಕ್ರಮ ಜರುಗಲಿದೆ ಎಂದು ಶಿವ ಪ್ರತಿಷ್ಠಾಪನಾ ಸೇವಾ ಸಮಿತಿ ಅಧ್ಯಕ್ಷ ಅಶೋಕ ಪಟ್ಟಣ ತಿಳಿಸಿದರು.

ಇಲ್ಲಿನ ರಾಮೇಶ್ವರ ದೇವಸ್ಥಾನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಶಿವನ ಮೂರ್ತಿ ಹಾಗೂ ಬೃಹತ್ ನಂದಿ ವಿಗ್ರಹಕ್ಕೆ ವಿಶೇಷ ಪೂಜೆ ನೆರವೇರಲಿದೆ. ಭಜನೆ, ಶಿವ ನಾಮಸ್ಮರಣೆ ಜರುಗಲಿವೆ ಎಂದರು.

ಸಂಜೆ ಮಹಾಶಿವರಾತ್ರಿ ಕಾರ್ಯಕ್ರಮದ ಉದ್ಘಾಟನೆಯು ಶಾಸಕ ಅಶೋಕ ಪಟ್ಟಣ ನೇತತ್ವದಲ್ಲಿ ನಡೆಯಲಿದೆ. ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿವೆ. ವಿವಿಧ ಕ್ಷೇತ್ರಗಳ ಸಾಧಕರನ್ನು ಸತ್ಕರಿಸಲಾಗುತ್ತಿದೆ. ರಾತ್ರಿ 8.30 ಗಂಟೆಯಿಂದ 9.30ರ ವರೆಗೆ ಕೀರ್ತನ ಕೇಸರಿ ಗುರುನಾಥ ಶಾಸೀಗಳಿಂದ ಶಿವ ನಾಮಸ್ಮರಣೆ ನಡೆಯಲಿದೆ.

9.30ರಿಂದ 10.30ರ ವರೆಗೆ ಮಣಕವಾಡ ಅನ್ನದಾನೀಶ್ವರ ಮಠದ ಅಭಿನವ ಮತ್ಯುಂಜಯ ಸ್ವಾಮೀಜಿ ಪ್ರವಚನ ಹಮ್ಮಿಕೊಳ್ಳಲಾಗಿದೆ. ಸುಗಮ ಸಂಚಾರಕ್ಕಾಗಿ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲು ಪೊಲೀಸ್ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ. ಭಕ್ತರಿಗೆ ಅಲ್ಪೋಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಸಮಿತಿ ಸದಸ್ಯರಾದ ಸುರೇಶ ಪತ್ತೇಪುರ, ಪ್ರದೀಪ ಪಟ್ಟಣ, ವಿಜಯ ಶೆಟ್ಟಿ, ಜಯಪ್ರಕಾಶ ಶಿಂಧೆ, ನಂದಕುಮಾರ ಸುರೇಬಾನ, ಕೀರಪ್ಪ ಕೊಂಗವಾಡ, ಡಿವೈಎಸ್‌ಪಿ ಚಿದಂಬರ ಮಡಿವಾಳರ, ಪಿಎಸ್‌ಐ ಮುನ್ಯಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net