ಮಹಾಶಿವರಾತ್ರಿ ಆಚರಣೆಗೆ ಜಿಲ್ಲೆ ಸಜ್ಜು, ಶಿವನ ದೇಗುಲಗಳಲ್ಲಿ ವಿಶೇಷ ಪೂಜೆ, ಹಬ್ಬದ ಸಾಮಗ್ರಿ ಖರೀದಿ ಜೋರು

28dbp5
Published on

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ

ಸತತ ಎರಡು ವರ್ಷ ಮಹಾಶಿವರಾತ್ರಿ ಸಂಭ್ರಮಕ್ಕೆ ಕರೊನಾ ಕಾರಣದಿಂದ ಕವಿದಿದ್ದ ಮಂಕು ಸರಿದಿದ್ದು, ಈ ಬಾರಿ ಜಿಲ್ಲೆಯಾದ್ಯಂತ ಶಿವರಾತ್ರಿ ಆಚರಣೆಗೆ ಜಿಲ್ಲೆಯ ಜನ ಸಂಭ್ರಮದ ಸಿದ್ಧತೆ ಮಾಡಿಕೊಂಡಿದ್ದಾರೆ.

ಹಬ್ಬದ ಮುನ್ನಾದಿನವಾದ ಸೋಮವಾರ ಹೂವು, ಹಣ್ಣು - ತರಕಾರಿ ಮಾರುಕಟ್ಟೆಗಳಲ್ಲಿ ಹಬ್ಬದ ಸಾಮಗ್ರಿ ಖರೀದಿಗೆ ಜನ ಮುಗಿಬಿದ್ದ ದೃಶ್ಯ ಕಂಡುಬಂತು. ತರಕಾರಿ ದರ ತುಸು ಕಡಿಮೆಯಾಗಿದ್ದರೂ ಹೂವು, ಹಣ್ಣಿನ ದರ ಗ್ರಾಹಕರ ಜೇಬು ಸುಡುತ್ತಿದೆ.

ದೇಗುಲಗಳ ಅಲಂಕಾರ: ದಕ್ಷಿಣ ಕಾಶಿಯೆಂದೇ ಪ್ರಸಿದ್ಧವಾದ ಶಿವಗಂಗೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಶಿವರಾತ್ರಿ ಜಾಗರಣೆಗಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಬ್ಬದ ರಾತ್ರಿ ಜಾಗರಣೆ, ನಿರಂತರ ಪೂಜೆ, ಅಭಿಷೇಕ ನಡೆಸಲು ದೇಗುಲದ ಆಡಳಿತ ಮಂಡಳಿ ಸಜ್ಜಾಗಿದೆ, ಅದೇ ರೀತಿ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ, ಮಧುರೆ ತಾಲೂಕಿನಲ್ಲಿರುವ ಚಿಕ್ಕಮಧುರೆ, ಹೊಸಕೋಟೆ ತಾಲೂಕು ಸೂಲಿಬೆಲೆಯಲ್ಲಿನ ಪಂಚ ಶಿವನ ದೇಗುಲಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಹಳ್ಳಿಗಳಲ್ಲಿ ಸಾಲುಸಾಲು ಹಬ್ಬ: ಶಿವರಾತ್ರಿಯಂದೇ ಹಲವು ಹಳ್ಳಿಗಳಲ್ಲಿ ಹಬ್ಬಗಳು ಆರಂಭವಾಗಿದ್ದು, ಗ್ರಾಮೀಣ ಪ್ರದೇಶಗಳು ಕಳೆಗಟ್ಟಿವೆ, ನಗರ ಪ್ರದೇಶಗಳಲ್ಲಿ ನೆಲೆಸಿರುವ ನೆಂಟರಿಷ್ಟರು, ಬಂಧು-ಬಳಗ ಸ್ನೇಹಿತರು ಸ್ವಗ್ರಾಮಗಳತ್ತ ಹೆಜ್ಜೆ ಹಾಕಿದ್ದು, ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಕಳೆತಂದಿದೆ.

ಶಿವಗಂಗೆಯಲ್ಲಿ ಶಿವರಾತ್ರಿ ಸಂಭ್ರಮ ದಾಬಸ್‌ಪೇಟೆ: ಶ್ರೀಕ್ಷೇತ್ರ ಶಿವಗಂಗೆಯಲ್ಲಿ ಶಿವರಾತ್ರಿ ಸಂಭ್ರಮ ಮನೆಮಾಡಿದೆ, ಕರೊನಾ ಕಾರಣದಿಂದ ಸರಳ ಆಚರಣೆಗಷ್ಟೇ ಸೀಮಿತವಾಗಿದ್ದ ಧಾರ್ಮಿಕ ಕಾರ್ಯಕ್ರಮಗಳು ಈ ಬಾರಿ ಹೊಳಪು ಪಡೆದಿವೆ. ಶ್ರೀ ಗಂಗಾಧರೇಶ್ವರ ಸ್ವಾಮಿಗೆ ಪಂಚಾಮೃತ, ಮೃತ್ಯುಂಜಯ ಹೋಮ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ವೇದಿಕೆ ಸಿದ್ಧಗೊಂಡಿದೆ, ಸೋಮವಾರ ರಾತ್ರಿ ಗಿರಿ ಗಂಗಾಧರೇಶ್ವರನಿಗೆ ರುದ್ರಾಭಿಷೇಕ ಹಾಗೂ ಪ್ರಸಾದ ವಿನಿಯೋಗ, ರಾತ್ರಿ 9 ರಿಂದ ಬುಧವಾರ ಬೆಳಗ್ಗೆ 6 ಗಂಟೆವರೆಗೆ ಹರಿಕಥೆ, ಪಾರಾಯಣ ಹಮ್ಮಿಕೊಳ್ಳಲಾಗಿದೆ. ಬೆಟ್ಟದ ಪಶ್ಚಿಮಕ್ಕಿರುವ ಮಹದೇಶ್ವರ ದೇವಾಲಯದಲ್ಲಿ ಅಹೋರಾತ್ರಿ ಹರಿಕಥೆ ಏರ್ಪಡಿಸಲಾಗಿದೆ. ಹೊನ್ನಮ್ಮ ಮತ್ತು ಪಾರ್ವತಿ ದೇವರಿಗೆ ಅರಿಶಿಣ ಸೇವೆ, ಕುಂಕುಮ ಸೇವೆ, ತ್ರಿಶಕ್ತಿ ಸೇವೆ, ನವರಣ, ಅರ್ಚನೆ ನಡೆಯಲಿದೆ.

ಪ್ರದಾನ ಅರ್ಚಕ ಶ್ಯಾಂ ಪ್ರಸಾದ್ ದೀಕ್ಷಿತ್ ಮಾತನಾಡಿ, 3 ವರ್ಷದಿಂದ ಕರೊನಾ ಕಾರಣದಿಂದ ಸರಳವಾಗಿಯೇ ಶಿವರಾತ್ರಿ ಆಚರಿಸಲಾಗಿತ್ತು. ಈ ಬಾರಿ ಸಮಸ್ಯೆ ಇಲ್ಲ, ಶಿವರಾತ್ರಿಯಂದು ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನಡೆಯಲಿವೆ, ಇದಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶ್ಯಾಂ ಪ್ರಸಾದ್ ದೀಕ್ಷಿತ್, ಪ್ರಧಾನ ಅರ್ಚಕ, ಶಿವಗಂಗೆ ಮಂಗಳವಾರ ಮುಂಜಾನೆಯಿಂದ ದೇಗುಲದಲ್ಲಿ ವಿವಿಧ ಪೂಜೆ ಪುನಸ್ಕಾರಗಳು ಆರಂಭಗೊಳ್ಳಲಿವೆ, ರುದ್ರಾಭಿಷೇಕ , ಪಂಚಾಮೃತ ಅಭಿಷೇಕ ಮಾಡಲಾಗುತ್ತದೆ, ಬುಧವಾರ ಮುಂಜಾನೆ 5.30 ನಿರಂತರ ದೇವರ ಸೇವೆ ನಡೆಯಲಿದೆ. ಎಚ್.ಪ್ರಭುಸ್ವಾಮಿ, ಅರ್ಚಕ, ಶಿವಗಂಗೆ

ಪೊಲೀಸ್ ಭದ್ರತೆ: ನೆರೆ ಜಿಲ್ಲೆ ಸೇರಿ ಅನ್ಯರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಶಿವಗಂಗೆ ಬೆಟ್ಟದ ಪ್ರವೇಶ ದ್ವಾರದಿಂದ ಸುತ್ತಮುತ್ತಲು ಪೊಲೀಸ್ ಭದ್ರತೆ ಒದಗಿಸಲಾಗಿದೆ. ಇದಕ್ಕಾಗಿಯೇ 60 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ದಾಬಸ್‌ಪೇಟೆ ಪೋಲಿಸ್ ಆರಕ್ಷಕ ಉಪ ನಿರೀಕ್ಷಕ ಬಿ.ಎಂ.ಮುರಳಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net