

ಚನ್ನರಾಯಪಟ್ಟಣ: ಭಗವಾನ್ ಮಹಾವೀರರ ತತ್ವ, ಸಿದ್ಧಾಂತ, ಶಾಂತಿ ಸಂದೇಶಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ತಹಸೀಲ್ದಾರ್ ಜೆ.ಕೆ.ಗೋವಿಂದ್‌ರಾಜ್ ಬಣ್ಣಿಸಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಭಗವಾನ್ ಮಹಾವೀರರ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಶಾಂತಿಧೂತ, ಶಾಂತಿಯ ಪ್ರತಿಪಾದಕ ಮಹಾವೀರರು ಎರಡೂವರೆ ಸಾವಿರ ವರ್ಷಗಳ ಹಿಂದೆ ಸಮಾಜ ತಿದ್ದುವ ಕೆಲಸಕ್ಕೆ ಮುಂದಾಗಿ ಸಮಾಜದ ದಾರಿದೀಪವಾಗಿದ್ದಾರೆ ಎಂದರು.
ಶಾಂತಿ, ಅಹಿಂಸೆ, ಮಾನವ ತತ್ವ, ಪರಧರ್ಮ ಸಹಿಷ್ಣುತೆ ಎಲ್ಲವನ್ನೂ ಜೈನಧರ್ಮದಲ್ಲಷ್ಟೇ ಕಾಣಲು ಸಾಧ್ಯ. 24 ತೀರ್ಥಂಕರರು ಮನುಕುಲದ ಉದ್ಧಾರಕ್ಕೆ ಶಾಂತಿ ಸಂದೇಶ ನೀಡಿದವರು. ಜೈನಸಮಾಜ ದೇಶ ಕಟ್ಟುವ ಕೆಲಸ ಮಾಡಿದೆ. ಜೈನಕಾಶಿ ಶ್ರವಣಬೆಳಗೊಳದ ಜೈನಮಠದ ಚಾರುಕೀರ್ತಿ ಶ್ರೀಗಳ ಆಗಲಿಕೆ ಅತೀವ ನೋವು ತಂದಿದೆ. ಅವರ ಕಾಲಘಟ್ಟದಲ್ಲಿ ನಾವು ಅವರೊಂದಿಗೆ ಕಳೆದ ಕ್ಷಣಗಳು ನಮ್ಮ ಜೀವಿತಾವಧಿಯ ಪುಣ್ಯಕ್ಷಣಗಳು, ಅವರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಜೈನ ಸಮಾಜದ ತಾಲೂಕು ಅಧ್ಯಕ್ಷ ಅಶೋಕ್‌ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ ಸಂಜಯ್‌ಸೇಠ್, ಯಶೋಧ ಜೈನ್ ಮತ್ತಿತರರಿದ್ದರು.