ಮಹಾವೀರ ಜಯಂತಿ ಅದ್ದೂರಿ ಮೆರವಣಿಗೆ

Mahaveera Jayanthi
Published on

ಚಿತ್ರದುರ್ಗ: ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಜೈನ್ ಸಮುದಾಯದಿಂದ ಗುರುವಾರ ಹಮ್ಮಿಕೊಂಡಿದ್ದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಮಹಾವೀರರ ವಿಗ್ರಹ ಹಾಗೂ ಭಾವಚಿತ್ರವನ್ನು ಬೆಳ್ಳಿ ವರ್ಣದ ಸುಂದರ ಸಾರೋಟಿನಲ್ಲಿ ಇರಿಸಲಾಗಿತ್ತು. ಸುತ್ತಲು ವಿವಿಧ ಪುಷ್ಪಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಅಲ್ಲದೆ, ನೋಡುಗರ ಕಣ್ಮನ ಸೆಳೆಯಿತು.

ಛತ್ರ, ಚಾಮರ, ಡೊಳ್ಳು, ತಮಟೆ ವಾದ್ಯ, ಜನಪದ ವಾದ್ಯ ಸೇರಿ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ಮೆರವಣಿಗೆಯಲ್ಲಿ ಪುರುಷರು, ಮಹಿಳೆಯರು ಒಳಗೊಂಡು ಹಿರಿಯರು, ಕಿರಿಯರೆನ್ನದೆ ಜೈನ ಸಮುದಾಯದ ಬಹುತೇಕರು ಸಂತಸದಿಂದ ಪಾಲ್ಗೊಂಡು ಭಕ್ತಿ, ಭಾವ ಮೆರೆದರು.

ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ಮಂದಿ ಜೈನ ಸಮುದಾಯದವರು ಮೆರವಣಿಗೆಯಲ್ಲಿ ಗಮನ ಸೆಳೆದರು. ಮಾರ್ಗದುದ್ದಕ್ಕೂ ಅಲ್ಲಲ್ಲಿ ಸಿಹಿ ಹಂಚಿದರು.

ಇಲ್ಲಿನ ಜೈನ ದೇಗುಲದಿಂದ ಆರಂಭವಾದ ಮೆರವಣಿಗೆ ಲಕ್ಷ್ಮಿಬಜಾರ್, ಗಾಂಧಿ, ಎಸ್‌ಬಿಐ, ಅಂಬೇಡ್ಕರ್, ಮದಕರಿನಾಯಕ ವೃತ್ತ, ಬಿ.ಡಿ.ರಸ್ತೆ, ಚಿಕ್ಕಪೇಟೆ, ಆನೆಬಾಗಿಲು ಮಾರ್ಗಗಳಲ್ಲಿ ಸಂಚರಿಸಿದ ನಂತರ ಪುನಃ ದೇಗುಲ ತಲುಪಿತು. ಶ್ರದ್ಧಾ-ಭಕ್ತಿಯಿಂದ ಜಯಂತಿ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net