ಮಹಾಲಕ್ಷ್ಮೀ ರೂಪದಲ್ಲಿ ಕಂಗೊಳಿಸಿದ ಶಕ್ತಿದೇವತೆಗಳು

Maha Lakshmi Devi
Published on

ಚಿತ್ರದುರ್ಗ: ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ವರಮಹಾಲಕ್ಷ್ಮೀ ದೇವಿ ಹಬ್ಬಕ್ಕೆ ಜಿಲ್ಲೆಯ ಶಕ್ತಿದೇವತೆ ದೇಗುಲಗಳಲ್ಲೂ ಶುಕ್ರವಾರ ಮುಂಜಾನೆಯಿಂದಲೇ ಪುಷ್ಪ, ನೋಟುಗಳಿಂದ ಅಲಂಕಾರ ಸೇವೆ, ಅಭಿಷೇಕ ಸೇರಿ ವಿಶೇಷ ಪೂಜೆಗಳು ಜರುಗಿದವು.

ನಗರದ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿಗೆ ಪುಷ್ಪಗಳಿಂದ ವೈಭವೋಪೇತವಾಗಿ ಮಹಾಲಕ್ಷ್ಮೀ ರೂಪದ ಮಾದರಿಯಲ್ಲಿ ಅಲಂಕರಿಸಲಾಗಿತ್ತು. ದೇವಿಯ ಮೂರ್ತಿಯನ್ನು ಭಕ್ತರು ಕಣ್ತುಂಬಿಕೊಂಡರು.

ದುರ್ಗದ ಅಧಿದೇವತೆ ಏಕನಾಥೇಶ್ವರಿ, ನಗರದೇವತೆಗಳಾದ ಉಚ್ಚಂಗಿಯಲ್ಲಮ್ಮ, ಕಣಿವೆಮಾರಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಬನ್ನಿ ಮಹಾಕಾಳಿ, ಚೌಡೇಶ್ವರಿ, ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ, ಅಂತರಘಟ್ಟಮ್ಮ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ, ಮಲೆನಾಡು ಚೌಡೇಶ್ವರಿ, ಸಿಂಗಧೂರು ಚೌಡೇಶ್ವರಿ, ಕನ್ಯಕಾ ಪರಮೇಶ್ವರಿ, ಅಂಬಾಭವಾನಿ, ದುರ್ಗಾ ಮಾತೆ, ಕಾಳಿ ಕಮಠೇಶ್ವರಿ, ಮಾಸ್ತಮ್ಮ ದೇವಿ ಸೇರಿ ಶಕ್ತಿದೇವತೆಗಳಿಗೆ ಲಕ್ಷ್ಮೀ ರೂಪದಲ್ಲಿ ಅಲಂಕಾರ ಸೇವೆ ನೆರವೇರಿದವು.

ಬೆಳಗ್ಗೆಯಿಂದ ರಾತ್ರಿ 9.30ರವರೆಗೂ ಸಾವಿರಾರು ಭಕ್ತರು ದೇಗುಲಗಳಿಗೆ ಭೇಟಿ ನೀಡಿ ಶಕ್ತಿದೇವತೆಗಳ ಅಲಂಕಾರ ಕಣ್ತುಂಬಿಕೊಂಡರು. ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ನೆರೆದಿದ್ದ ಭಕ್ತರಿಗೆ ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು.

ಗಮನಸೆಳೆದ ನೋಟಿನಾಲಂಕಾರ: ರೈಲ್ವೆ ನಿಲ್ದಾಣ ಸಮೀಪದ ಆದಿಶಕ್ತಿ ಮಾರಿಕಾಂಬ ದೇವಿ, ಮೆದೇಹಳ್ಳಿ ಭೋವಿ ಕಾಲನಿಯ ಕೊಲ್ಲಾಪುರದ ಮಹಾಲಕ್ಷ್ಮೀ ದೇವಿಗೆ ಸಾವಿರಾರು ನೋಟುಗಳಿಂದ ಲಕ್ಷ್ಮೀ ರೂಪದಲ್ಲಿ ಅಲಂಕರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net