ಮಹಾಲಕ್ಷ್ಮೀ ಮನೆಗೆ ಬಾರಮ್ಮ…

Devi Maha Lakshmi
Published on

ಚಿತ್ರದುರ್ಗ: ಸಕಲ ಸಂಪತ್ತಿನ ಅಧಿದೇವತೆ, ಕಮಲ ಮೊಗದ ನಾರಾಯಣಿ, ಶ್ರೀ ವರಮಹಾಲಕ್ಷ್ಮೀ ದೇವಿಯ ಹಬ್ಬವನ್ನು ಕೋಟೆನಗರಿ ಸೇರಿ ಜಿಲ್ಲಾದ್ಯಂತ ಸಂಭ್ರಮದೊಂದಿಗೆ ಶುಕ್ರವಾರ ಶ್ರದ್ಧಾ-ಭಕ್ತಿಯಿಂದಲೂ ಆಚರಿಸಲಾಯಿತು.

ಮನೆಗಳ ಮುಂಭಾಗ ಮುಂಜಾನೆ ತಳಿರು-ತೋರಣಗಳಿಂದ ಅಲಂಕೃತಗೊಂಡಿದ್ದ ಬಾಗಿಲುಗಳು, ವೈವಿಧ್ಯಮಯ ರಂಗೋಲಿಗಳು ಕಂಗೊಳಿಸಿದವು. ನಾರಿಯರ ಸಡಗರಕ್ಕೆ ಹಬ್ಬ ಸಾಕ್ಷಿಯಾಯಿತು.

ಶುಚಿಗೊಳಿಸಿದ್ದ ದೇವರ ಕೋಣೆ, ಹೊರಭಾಗದಲ್ಲಿ ಮಹಾಲಕ್ಷ್ಮೀ ದೇವಿ ಮೂರ್ತಿ ಪ್ರತಿಷ್ಠಾಪಿಸಿ, ಶುಭ್ರ ವಸ್ತ್ರ ಧರಿಸಿ, ಆಭರಣ ತೊಡಿಸಿ, ಕಮಲದ ಹೂ, ಹಾರ, ವಿವಿಧ ಪುಷ್ಪಗಳಿಂದ ಕಣ್ಮನ ಸೆಳೆಯುವಂತೆ ಸಿಂಗರಿಸಿ, ಹಣ್ಣು, ನೈವೇದ್ಯ ಸಮರ್ಪಿಸುವ ಮೂಲಕ ಮಹಿಳೆಯರು ವಿಶೇಷವಾಗಿ ಪೂಜೆ ಸಲ್ಲಿಸಿದರು.

ದೇವಿ ಪುರಾಣ, ವರಮಹಾಲಕ್ಷ್ಮೀ ಅಷ್ಟೋತ್ತರ, ಸಹಸ್ರನಾಮ ಪಠಿಸಿದರು. ಭಕ್ತಿ ಗೀತೆಗಳೊಂದಿಗೆ ಮಹಾಮಂಗಳಾರತಿ ನೆರವೇರಿಸಿದರು. ಸಂಬಂಧಿಕರು, ನೆರೆ-ಹೊರೆಯವರನ್ನು ಪೂಜೆಗೆ ಕರೆದು ಅರಿಶಿಣ-ಕುಂಕುಮ, ಫಲ-ತಾಂಬೂಲದೊಂದಿಗೆ ಉಡಿ ತುಂಬುವ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net