

ಧಾರವಾಡ: ಮಹಾರಾಷ್ಟ್ರದಿಂದ ಮರಳಿದವರಲ್ಲಿ ಕೋವಿಡ್ ಸೋಂಕು ಪತ್ತೆ ಪ್ರಕರಣಗಳು ದಿನೇದಿನೆ ಹೆಚ್ಚುತ್ತಲೇ ಇವೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಮರಳಿದ್ದ ಇಬ್ಬರು ಹಾಗೂ ಸೋಂಕಿತನೊಂದಿಗೆ ಸಂಪರ್ಕ ಹೊಂದಿದ್ದ ಮಹಿಳೆ ಸೇರಿ ಮೂವರಲ್ಲಿ ಭಾನುವಾರ ಕರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
21 ವರ್ಷದ ಮಹಿಳೆ ಹಾಗೂ 11 ವರ್ಷದ ಬಾಲಕಿ ಮಹಾರಾಷ್ಟ್ರದಿಂದ ಇತ್ತೀಚೆಗೆ ಹಿಂದಿರುಗಿದ್ದರು. ಇಲ್ಲಿಯ ಕೃಷಿ ವಿಶ್ವ ವಿದ್ಯಾಲಯ ಆವರಣದ ಆಗಮನ ಕೇಂದ್ರದಲ್ಲಿ ಅವರ ಗಂಟಲ ದ್ರವ ಮಾದರಿ ಸಂಗ್ರಹಿಸಿ, ಸಾಂಸ್ಥಿಕ ಕ್ವಾರಂಟೈನ್ನಲ್ಲಿರಲು ಸೂಚಿಸಲಾಗಿತ್ತು. ಭಾನುವಾರ ವರದಿ ಬಂದಿದ್ದು, ಕರೊನಾ ಸೋಂಕು ಇರುವುದು ಖಚಿತವಾಗಿದೆ.
ಇನ್ನೋರ್ವ 24 ವರ್ಷದ ಮಹಿಳೆ ಈ ಹಿಂದೆ ಹೋಂ ಕ್ವಾರಂಟೈನ್ನಲ್ಲಿದ್ದರು. ಕರೊನಾ ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ್ದರು. ಗಂಟಲ ದ್ರವ ಪರೀಕ್ಷೆ ವರದಿ ಪಾಸಿಟಿವ್ ಬಂದಿದೆ. ಈ ಮೂವರನ್ನೂ ಹುಬ್ಬಳ್ಳಿ ಕಿಮ್್ಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದರಿಂದ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 60ಕ್ಕೆ ಏರಿಕೆಯಾಗಿದೆ. ಈಗಾಗಲೇ 34 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರಿದಿದೆ.
*597 ಶಂಕಿತರು ಪತ್ತೆ: ಜಿಲ್ಲೆಯಲ್ಲಿ ಶನಿವಾರ ಸಂಜೆಯಿಂದ ಭಾನುವಾರ ಸಂಜೆವರೆಗಿನ 24 ಗಂಟೆ ಅವಧಿಯಲ್ಲಿ 597 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾವಹಿಸಿದವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಶನಿವಾರ ಇದ್ದ 19152 ನಿಗಾವಹಿಸಿದವರ ಸಂಖ್ಯೆ ಭಾನುವಾರ 19788ಕ್ಕೆ ಏರಿಕೆಯಾಗಿದೆ.
ಈವರೆಗೆ ಜಿಲ್ಲೆಯಲ್ಲಿ 18827 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 17526 ಜನರ ವರದಿ ನೆಗೆಟಿವ್ ಬಂದಿವೆ. ಇನ್ನೂ 1275 ವರದಿಗಳು ಬರಬೇಕಿದೆ.
ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 19788 ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 5868 ಜನರು ಮನೆಯಲ್ಲೇ ಪ್ರತ್ಯೇಕವಾಗಿ (14 ದಿನ) ವಾಸವಾಗಿದ್ದಾರೆ. ಆಸ್ಪತ್ರೆ ಪ್ರತ್ಯೇಕ ವಾರ್ಡಗಳಲ್ಲಿ 26 ಜನ ದಾಖಲಾಗಿದ್ದಾರೆ. 7152 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದರೆ, 6742 ಜನರು 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.