ಮಹಾರಾಷ್ಟ್ರಕ್ಕೆ ಹೊರಟ ತಾಯಿ, ಮಗಳಿಗೆ ಸಂಕಷ್ಟ

24KWR2A
Published on

ಕಾರವಾರ: ಲಾಕ್​ಡೌನ್ ವಿಷಯ ತಿಳಿಯದೇ ಮಹಾರಾಷ್ಟ್ರಕ್ಕೆ ಹೊರಟ ತಾಯಿ, ಮಗಳು ನಗರದಲ್ಲಿ ಸಂಕಷ್ಟಕ್ಕೀಡಾದ ಘಟನೆ ಭಾನುವಾರ ನಡೆದಿದೆ.

ಕೊಡಗು ವಿರಾಜಪೇಟೆಯಲ್ಲಿ ಹೋಂ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಮಹಾರಾಷ್ಟ್ರ ರತ್ನಾಗಿರಿಯ ತಾಯಿ ಮಗಳು ತಮ್ಮ ಊರಿಗೆ ತೆರಳಲು ಮುಂದಾಗಿದ್ದರು. ಸೇವಾ ಸಿಂಧು ವೆಬ್​ಸೈಟ್​ನಲ್ಲಿ ಪಾಸ್ ಪಡೆದಿದ್ದರು. ಆದರೆ, ನೇರವಾದ ವಾಹನ ಅಥವಾ ರೈಲಿನ ವ್ಯವಸ್ಥೆ ಇಲ್ಲದ ಕಾರಣ ಇಬ್ಬರೂ ಕೊಡಗು ಬಿಟ್ಟು ಮಂಗಳೂರು, ಕುಂದಾಪುರ ಮಾರ್ಗವಾಗಿ ಬಸ್ ಹಾಗೂ ಖಾಸಗಿ ವಾಹನ ಹಿಡಿದು ಶನಿವಾರ ರಾತ್ರಿ ಕಾರವಾರ ತಲುಪಿದ್ದರು.

ರಾತ್ರಿಯೇ ಅಂಗಡಿಗಳು ಮುಚ್ಚಿದ್ದರಿಂದ ಬೇರೆ ದಾರಿಯಿಲ್ಲದೆ, ಊಟ, ತಿಂಡಿಯೂ ಇಲ್ಲದೇ ಕಾರವಾರ ಬಸ್ ನಿಲ್ದಾಣದಲ್ಲೇ ಕಾಲ ಕಳೆದಿದ್ದರು. ಭಾನುವಾರ ಬೆಳಗ್ಗೆ ಸಂಚಾರಿ ಠಾಣೆ ಪಿಎಸ್​ಐ ಎನ್.ಡಿ. ಜಕ್ಕಣವರ್, ಶಹರ ಠಾಣೆ ಪಿಎಸ್​ಐ ಸಂತೋಷಕುಮಾರ್ ಅವರ ಸಮಸ್ಯೆ ಕೇಳಿ ಆಸ್ಪತ್ರೆಗೆ ಕಳಿಸಿ ಆರೋಗ್ಯ ಪರೀಕ್ಷೆ ಮಾಡಿಸಿದರು. ನಂತರ ತಿಂಡಿ, ನೀರು ಕೊಟ್ಟು ಹೋಟೆಲ್ ಒಂದರಲ್ಲಿ ಉಳಿಯುವ ವ್ಯವಸ್ಥೆ ಮಾಡಿಕೊಟ್ಟರು. ತಾಯಿ ಮಗಳು ಸೋಮವಾರ ಬೆಳಗಾವಿಗೆ ತೆರಳಿ ಅಲ್ಲಿಂದ ಮಹಾರಾಷ್ಟ್ರದೆಡೆಗೆ ಪ್ರಯಾಣ ಬೆಳೆಸುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net