ಮಹಾರಾಷ್ಟ್ರ ನಡೆ ಖಂಡಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

8
Published on

ಮೈಸೂರು: ಮಹಾರಾಷ್ಟ್ರ ಸರ್ಕಾರದ ಗೂಂಡಾಗಿರಿ, ಎಂಇಎಸ್ ಪುಂಡಾಟಿಕೆ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರಿಂದ ನಗರದಲ್ಲಿ ಧರಣಿ ನಡೆಯಿತು.
ನಗರದ ಹಾರ್ಡಿಂಜ್ ವೃತ್ತದಲ್ಲಿ ಭಾನುವಾರ ಧರಣಿ ನಡೆಸಿದ ಅವರು, ಮಹಾರಾಷ್ಟ್ರ ಸರ್ಕಾರ ಗಡಿ ಕ್ಯಾತೆ ತೆಗೆದು ಉದ್ಧಟತನ ಪ್ರದರ್ಶಿಸುತ್ತಿದೆ. ಬೆಳಗಾವಿ ನಮ್ಮ ಅಭಿಬಾಜ್ಯ ಅಂಗವಾಗಿದ್ದು, ಯಾವುದೇ ಕಾರಣಕ್ಕೂ ಒಂದು ಅಂಗುಲ ಜಾಗವನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಸೊಲ್ಲಾಪುರ, ಅಕ್ಕಲ ಕೋಟೆ, ಜತ್ತ ಹಾಗೂ ಅರ್ಧ ಭಾಗ ಮುಂಬೈ ಕರ್ನಾಟಕಕ್ಕೆ ಸೇರಬೇಕು. ಸುಮ್ಮನೆ ಗಡಿ ಕ್ಯಾತೆ ತೆಗೆದು ಮಹಾರಾಷ್ಟ್ರ ಸರ್ಕಾರ ತೊಂದರೆ ಕೊಡುತ್ತಿದೆ ಎಂದು ದೂರಿದರು.
ಇಂತಹ ಪುಂಡಾಟಿಕೆ ವಿರುದ್ಧ ನಮ್ಮ ರಾಜ್ಯ ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು. ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಕೂಡಲೇ ನಿಷೇಧಿಸಬೇಕು. ಬೆಳಗಾವಿ ಸುತ್ತಮುತ್ತಲಿನ ನಮ್ಮ ಶಾಸಕರು ಮರಾಠರ ಏಜೆಂಟರಂತೆ ವರ್ತಿಸುತ್ತಿದ್ದಾರೆ. ನಮ್ಮ ಬಸ್‌ಗಳಿಗೆ ಮಸಿ ಬಳೆದರೆ ಮಹಾರಾಷ್ಟ್ರದ ಮೇಲೆ ದೊಡ್ಡ ದಾಳಿ ಮಾಡುತ್ತೇವೆ. ಗಡಿಗಳನ್ನು ಬಂದ್ ಮಾಡಿ ಮಹಾರಾಷ್ಟ್ರದವರನ್ನು ಒಳಗೆ ಬರಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾಯಿಸಿದಾಕ್ಷಣ ಮೈಸೂರು ಆಕಾಶಕ್ಕೆ ಹೊರಟು ಹೋಗುವುದಿಲ್ಲ. ಮೈಸೂರು ರೈಲ್ವೆ ನಿಲ್ದಾಣ ಹಾಗೇ ಉಳಿದಿಲ್ಲವೆ?, ತಂಗುದಾಣದ ಗೋಪುರ ವಿಚಾರದಲ್ಲಿ ಇಬ್ಬರ ಜಗಳ ಸರಿಯಲ್ಲ. ಪ್ರತಾಪಸಿಂಹ ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು ಸಣ್ಣತನದ ರಾಜಕೀಯ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಟೋಪಿ, ಕೋಟು ಹಾಕಿದಾಕ್ಷಣ ಮುಸಲ್ಮಾನ ಅಗುವುದಿಲ್ಲ. ಇಂತಹ ಬೆಳವಣಿಗೆ ಮೈಸೂರಿಗೆ ಒಳ್ಳೆಯದಾಗುವುದಿಲ್ಲ ಎಂದು ಟೀಕಿಸಿದರು.
ನಗರಪಾಲಿಕೆ ಮಾಜಿ ಸದಸ್ಯ ಪ್ರದೀಪ್‌ಕುಮಾರ್, ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net