

ಮೈಸೂರು; ಮಹಾರಾಣಿ ವಿಜ್ಞಾನ ಕಾಲೇಜಿನ ಕಟ್ಟಡ ನವೀಕರಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಕೆ.ಹರೀಶ್‌ಗೌಡ ಭರವಸೆ ನೀಡಿದರು.
ಕನ್ನಡ ಜಾನಪದ ಪರಿಷತ್ ವತಿಯಿಂದ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ಮಹಾರಾಣಿ ದೇಸಿ ಸಂಭ್ರಮ- 2023’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಟ್ಟಡದ ಜೀರ್ಣೋದ್ಧಾರದ ಕುರಿತು ಜಿಲ್ಲಾ ಪಾರಂಪರಿಕ ಸಂರಕ್ಷಣಾ ಸಮಿತಿಯಿಂದ ಈಗಾಗಲೇ ವರದಿ ಪಡೆದಿದ್ದು, ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷನೂ ನಾನೇ ಆಗಿರುವುದರಿಂದ ಶೀಘ್ರದಲ್ಲೇ ಪರಿಶೀಲನಾ ಕಾರ್ಯ ಪೂರ್ಣಗೊಳಿಸಲಾಗುವುದು ಎಂದರು.
ಈ ಕಟ್ಟಡವನ್ನು ನವೀಕರಣ ಮಾಡುವ ಬದಲು ಕೆಡವಿ, ಹೊಸ ಕಟ್ಟಡ ನಿರ್ಮಿಸುವ ಬಗ್ಗೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರೊಂದಿಗೆ ಚರ್ಚಿಸಲಾಗುವುದು ಎಂದರು.
ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಪ್ರತಿ ವರ್ಷ ಪಾಶ್ಚಿಮಾತ್ಯ ಕಲೆಗಳ ಬಗ್ಗೆ ಸಂಭ್ರಮ ನಡೆಸಲಾಗುತ್ತಿತ್ತು. ಈ ಸಲ ದೇಸಿ ಸಂಭ್ರಮ ನಡೆಸುವುದು ಉತ್ತಮ ಬೆಳವಣಿಗೆ ಎಂದರು.
ಕಂಸಾಳೆ ಕುಮಾರಸ್ವಾಮಿ, ಸೋಬಾನೆ ಹಾಡುಗಾರರಾದ ಉತ್ತನಹಳ್ಳಿಯ ಸಣ್ಣಮ್ಮ, ಯರಗನಹಳ್ಳಿಯ ಮಾದಮ್ಮ, ಜಾನಪದ ಹಾಡುಗಾರ್ತಿ ವರುಣದ ರಾಣಿ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ವಿಭಾಗೀಯ ಸಂಚಾಲಕಿ ಡಾ.ಕಾವೇರಿ ಪ್ರಕಾಶ್, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಪ್ರಾಂಶುಪಾಲ ಡಾ.ಡಿ.ರವಿ, ಸಮಾಜ ಸೇವಕ ರವಿಗೌಡ, ಡಾ.ಕೆ.ಸಿದ್ದರಾಜು, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಪಿ.ಆರ್.ವನಿತಾ, ಖಜಾಂಚಿ ಡಾ.ದೀಪಾ ಆರ್.ಹೆಬ್ಬಾರ್, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸಿ.ಎಸ್.ಕೆಂಡಗಣ್ಣೇಗೌಡ, ಬೇಸೂರು ಮೋಹನ್ ಪಾಳೇಗಾರ್ ಇದ್ದರು.