ಮಹಾರಾಜರ ದೂರದೃಷ್ಟಿ ಅಭಿವೃದ್ಧಿಯ ಪ್ರತೀಕ

04Rajesh1
Published on

ಚಾಮರಾಜನಗರ: ಮೈಸೂರು ಪ್ರಾಂತ್ಯ ಅಭಿವೃದ್ಧಿಯಾಗಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಆಡಳಿತವೇ ಕಾರಣ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್(ಮುನ್ನ) ಬಣ್ಣಿಸಿದರು.

ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬುಧವಾರ ಆಯೋಜಿಸಿದ್ದ ಮೈಸೂರು ಸಂಸ್ಥಾನದ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯಲ್ಲಿ ನಾಲ್ವಡಿ ಅವರ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ಮೈಸೂರು ಮತ್ತು ಚಾಮರಾಜನಗರ, ಮಂಡ್ಯ, ಹಾಸನ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಮೇಲೆ ಮೈಸೂರು ಮಹಾರಾಜರ ಋಣಭಾರವಿದೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರ್ಯಕ್ರಮವನ್ನು ರೂಪಿಸಿ ಅವರ ಸೇವೆಯನ್ನು ಸ್ಮರಿಸಿಕೊಳ್ಳುವ ಅವಕಾಶ ನೀಡಿದೆ. ಸರ್ವರಿಗೂ ಧನ್ಯವಾದಗಳು ಜಯಂತಿಯನ್ನು ರಾಜ್ಯದ ಎಲ್ಲೆಡೆ ಆಚರಿಸುವ ಮೂಲಕ ಗೌರವ ಸಲ್ಲಿಸುವ ಕಾರ್ಯಕ್ರಮ ರೂಪಿಸಬೇಕು ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಋಗ್ವೇದಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರು. ಅವರ ಜನ್ಮದಿನ ನಾಡಿನ ಸಂಭ್ರಮದ ದಿನವಾಗಬೇಕು. ಕಲೆ, ಸಾಹಿತ್ಯ, ಸಂಗೀತ, ನೃತ್ಯ, ವಾಸ್ತುಶಿಲ್ಪ, ಕಟ್ಟಡಗಳು, ನೀರಾವರಿ, ಶಿಕ್ಷಣ, ಕೈಗಾರಿಕೆ, ಮಹಿಳಾ ಶಿಕ್ಷಣ, ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಅಭಿವೃದ್ಧಿ, ರಸ್ತೆ, ಕೆರೆ, ಕಾಲುವೆ, ಸೇತುವೆ, ಪ್ರತಿ ಕ್ಷೇತ್ರದ ಅಭಿವೃದ್ಧಿಯಲ್ಲಿಯೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಆಡಳಿತ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿದೆ ಎಂದರು.

ಇಡೀ ಜೀವನವನ್ನು ಸಂಸ್ಥಾನದ ಅಭಿವೃದ್ಧಿಗೆ ನೀಡಿ ಮೈಸೂರು ನಗರವನ್ನು ವಿಶ್ವ ಪ್ರಸಿದ್ಧಿಯನ್ನಾಗಿ ಮಾಡಿದ್ದಾರೆ. ಚಾಮರಾಜನಗರ ಮೈಸೂರು ಸಂಸ್ಥಾನದ ಅವಿಭಾಜ್ಯ ಅಂಗವಾಗಿದ್ದು ಮಹಾರಾಜರ ರಾಜಮನೆತನದ ಅವಿನಾಭಾವ ಸಂಬಂಧ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸೌಜನ್ಯ, ಪ್ರಜಾವಾತ್ಸಲ್ಯ ,ಪ್ರೀತಿ, ಕರುಣೆ, ವಿಶ್ವಾಸ, ದಕ್ಷ, ಆಡಳಿತ, ಪ್ರಗತಿಪರ, ಉದಾರ ತತ್ವಗಳ ಪೋಷಕರಾಗಿ ಸಾಹಿತ್ಯ ಸಂಸ್ಕೃತಿಯ ಪುರುಷರಾಗಿ ವಿಶ್ವದಲ್ಲೇ ಮಾದರಿಯಾದ ಆಡಳಿತವನ್ನು ನಡೆಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಮರೆಯಲು ಸಾಧ್ಯವಿಲ್ಲ ಎಂದರು.

ಚಾಮರಾಜೇಶ್ವರ ರಥೋತ್ಸವದ ಸಂದರ್ಭದಲ್ಲಿ ಮಹಾರಾಜರಿಗೆ ಮಹಾ ಗೌರವವನ್ನು ಸಲ್ಲಿಸುವ ಸಂಪ್ರದಾಯ ಇಂದಿಗೂ ಇರುವುದು ನಾವೆಲ್ಲರೂ ಕಾಣಬಹುದು. ಸಾಹಿತ್ಯ ಪರಿಷತ್ತಿನ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ ಅಭಿವೃದ್ಧಿಯ ವಿಚಾರ ಅರಿವು ಮೂಡಿಸುವ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶಗಳಲ್ಲೂ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸರಸ್ವತಿ , ಎಲ್.ಶಿವಲಿಂಗಮೂರ್ತಿ, ಬಿ.ಕೆ ಆರಾಧ್ಯ, ದೊರೆ, ಮಹೇಶ್ ಇದ್ದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸುವ ಮೂಲಕ ಸಾಹಿತ್ಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದರು. ಅಲ್ಲದೇ, ಅವರ ಸಂಸ್ಥಾನದಲ್ಲಿ ವಿಶ್ವದ ಶ್ರೇಷ್ಠ ಸಾಹಿತಿಗಳನ್ನು ಪ್ರೋತ್ಸಾಹಿಸಿ, ಸ್ವತಃ ಕವಿಯಾಗಿ, ಸಾಹಿತಿಯಾಗಿ ಕೃತಿಗಳನ್ನು ರಚಿಸಿದರು. ಕಲೆಯ ಪೋಷಕರಾಗಿ ಜನಪದ ಸಂಸ್ಕೃತಿಯನ್ನು ಶಾಶ್ವತವಾಗಿ ಉಳಿಸುವ ಕೆಲಸವನ್ನು ಮಾಡಿದರು. ರವಿಚಂದ್ರ ಪ್ರಸಾದ್, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net