ಮಹಾರಾಜರ ಆದರ್ಶ ಅಳವಡಿಸಿಕೊಳ್ಳಿ

14-4
Published on

ಕಾಗವಾಡ, ಬೆಳಗಾವಿ
ಅಹಿಂಸಾ ತತ್ತ್ವವನ್ನು ಜಗತ್ತಿಗೆ ಸಾರಿದ ಜೈನ ಮುನಿಗಳಾದ ಆಚಾರ್ಯ 108 ದೇವಸೇನ ಮುನಿ ಮಹಾರಾಜರ ತತ್ತ್ವಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡಾಗ ಪ್ರಥಮ ಪುಣ್ಯತಿಥಿ ಕಾರ್ಯಕ್ರಮಕ್ಕೆ ಬೆಲೆ ನೀಡಿದಂತಾಗುತ್ತದೆ ಎಂದು ಕಾಗವಾಡ ಯುವ ಮುಖಂಡ ಶ್ರೀನಿವಾಸ ಪಾಟೀಲ ಹೇಳಿದರು.

ಶೇಡಬಾಳ ಪಟ್ಟಣದ ಶಾಂತಿಸಾಗರ ಆಶ್ರಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆಚಾರ್ಯ 108 ದೇವಸೇನ ಮುನಿಮಹಾರಾಜರ ಪ್ರಥಮ ಪುಣ್ಯತಿಥಿ ಸಮಾರಂಭದಲ್ಲಿ ಮಾತನಾಡಿದ ಅವರು, 24 ತೀರ್ಥಂಕರರು ಜೈನ ಮುನಿಗಳು, ಅಹಿಂಸಾ ತತ್ತ್ವ ಪ್ರಚಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದು ತಿಳಿಸಿದರು.

ಜೈನ ಮುನಿಗಳಾದ ಆಚಾರ್ಯ 108 ದೇವಸೇನ ಮುನಿಮಹಾರಾಜರು ತಮ್ಮ ಮುನಿ ಜೀವನ ಪೂರ್ತಿ ಸತ್ಯ, ಅಹಿಂಸೆ ಪಾಲನೆ, ಧರ್ಮ ಪ್ರಚಾರ ಮಾಡುತ್ತಾ ಸ್ವರ್ಗವಾಸಿಗಳಾಗಿದ್ದಾರೆ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲ ಸಾಗೋಣ ಎಂದರು. ಆದಿನಾಥ ಭಗವಂತರಿಗೆ ಪೂಜಾಭಿಷೇಕ, ಆಚಾರ್ಯ ಪರಿಮೇಷ್ಟಿ ವಿಧಾನ, ಗುರುವಂದನಾ ಕಾರ್ಯಕ್ರಮಗಳು ಜರುಗಿದವು. ಸಂಜೆ ಆಚಾರ್ಯ 108 ದೇವಸೇನ ಮುನಿಮಹಾರಾಜರ ಭಾವಚಿತ್ರದ ಮೆರವಣಿಗೆ ಜರುಗಿತು.

ನಿವೃತ್ತ ಪ್ರಾಚಾರ್ಯ ಕುಮಾರ ಮಾಲಗಾಂವೆ, ದೇವಸೇನ ಮಹಾರಾಜರ ಜೀವನ ಚರಿತ್ರೆ ಕುರಿತು ಮಾತನಾಡಿದರು. ಬಾಲಬ್ರಹ್ಮಚಾರಿ ಭೈಯ್ಯಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಆಶ್ರಮದ ಸಂಚಾಲಕ ರಾಜು ಕೇಶವ ನಾಂದ್ರೆ, ಕುಮಾರ ಮಾಲಗಾಂವೆ, ಜೆ.ಎನ್.ನಾಂದಣಿ, ಸಚೀನ ಪಾಟೀಲ, ಭರತೇಶ ನರಸಗೌಡರ, ಭರತೇಶ ನಾಂದ್ರೆ, ಅಜೀತ ನರಸಗೌಡರ, ಪ್ರಕಾಶ ಚೌಗಲಾ, ಸುದರ್ಶನ ನರಸಗೌಡರ, ಕಿರಣ ಯಂದಗೌಡರ, ಉತ್ಕರ್ಷ ಪಾಟೀಲ, ಅರುಣ ಯಂದಗೌಡರ, ರಾಜು ಕುಸನಾಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net