ಮಹಾರಾಜ ಟ್ರೋಫಿಗೆ ಮೈಸೂರು ವಾರಿಯರ್ಸ್ ಸಿದ್ಧ

mysore
Published on

ಮೈಸೂರು: ನಗರದ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಆ.11ರಿಂದ ನಡೆಯುವ ಟಿ-20 ಮಹಾರಾಜ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಮೈಸೂರು ವಾರಿಯರ್ಸ್ ತಂಡ ಸಿದ್ಧವಾಗಿದ್ದು, ಪ್ರಶಸ್ತಿ ಉಳಿಸಿಕೊಳ್ಳುವ ಉತ್ಸಾಹದಲ್ಲಿದೆ.

ಅನುಭವಿ ಹಾಗೂ ಯುವ ಪ್ರತಿಭಾವಂತ ಆಟಗಾರರಿಂದ ಕೂಡಿರುವ ಎನ್.ಆರ್. ಗ್ರೂಪ್ ಮಾಲೀಕತ್ವದ ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡ ಈ ಸಲವೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಈಗಾಗಲೇ ಕಠಿಣಾಭ್ಯಾಸದಲ್ಲಿ ತೊಡಗಿದೆ.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ತಂಡದ ಆಟಗಾರರನ್ನು ಅನಾವರಣಗೊಳಿಸಲಾಯಿತು. ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಕೈ ಬೆರಳಿಗೆ ಗಾಯವಾಗಿರುವುದರಿಂದ ಆರಂಭಿಕ ಪಂದ್ಯಗಳಲ್ಲಿ ಮನೀಶ್ ಪಾಂಡೆ ತಂಡವನ್ನು ಮುನ್ನಡೆಸಲಿದ್ದಾರೆ.

ತಂಡದ ಮಾಲೀಕ ಅರ್ಜುನ್ ರಂಗ ಮಾತನಾಡಿ, ಈ ಸಲವೂ ಟ್ರೋಫಿಗೆ ನಮ್ಮ ತಂಡ ಸಂಪೂರ್ಣ ಸಜ್ಜಾಗಿದೆ. ಪ್ರಶಸ್ತಿ ಉಳಿಸಿಕೊಳ್ಳಲು ನಮ್ಮ ತಂಡ ಸೆಣಸಲಿದೆ. ಪಂದ್ಯಗಳು ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತವಾಗಿರುವುದು ಸಂತಷ ತಂದಿದೆ. ಆದರೆ, ಪಂದ್ಯ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ನೀಡದಿರುವುದರಿಂದ ಬೇಸರ ಮೂಡಿಸಿದೆ ಎಂದರು.

ತಂಡದ ಮುಖ್ಯ ಕೋಚ್ ಆರ್.ಎಕ್ಸ್. ಮುರಳಿ ಮಾತನಾಡಿ, ನಮ್ಮ ತಂಡ ಅನುಭವಿ, ಯುವ ಪ್ರತಿಭಾವಂತ ಆಟಗಾರರಿಂದ ಕೂಡಿದ್ದು, ಪಂದ್ಯಾವಳಿಗೆ ಉತ್ತಮವಾಗಿ ತಯಾರಿ ಮಾಡಿಕೊಂಡಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಇದೆ ಎಂದರು.

ಎನ್‌ಆರ್ ಗ್ರೂಪ್ ಕ್ರಿಕೆಟ್ ಜತೆಗೆ ಸಾಮಾಜಿಕ ಸೇವಾ ಕಾರ್ಯಗಳನ್ನೂ ಮಾಡುತ್ತಿದ್ದು, ಈ ಬಾರಿ, ದಕ್ಷಿಣ ಏಷ್ಯಾದ ಮೊದಲ ವೀಲ್‌ಚೇರ್ ಕ್ರಿಕೆಟ್ ಲೀಗ್ ಆಗಿರುವ ಎಬಿಲಿಟಿ ಸ್ಪೋರ್ಟ್ಸ್ ಲೀಗ್ (ಎಎಸ್‌ಎಲ್) ಟಿ20 ಜತೆಗೆ ಕಾಸ್ ಪಾರ್ಟನರ್‌ಶಿಪ್ ಮಾಡಿಕೊಂಡಿದೆ. ಈ ಮೂಲಕ ಅಂಗವಿಕಲರ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ನೆರವಾಗಲಿದೆ.

ಜತೆಗೆ ಕಳೆದ ವರ್ಷದಂತೆಯೇ ಈ ವರ್ಷವೂ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಆಟಗಾರರು ತೆಗೆಯುವ ಪ್ರತಿ ವಿಕೆಟ್‌ಗೆ 2 ಸಾವಿರ ರೂ., ಪ್ರತಿ ಸಿಕ್ಸರ್‌ಗೆ 1 ಸಾವಿರ ರೂ. ಮತ್ತು ಪ್ರತಿ ಫೋರ್‌ಗೆ 500 ರೂ. ದೇಣಿಗೆ ನೀಡಲಿದೆ. ಅಂಗವಿಕಲರ ಕ್ರೀಡಾಪಟುಗಳ ಸಬಲೀಕರಣಕ್ಕೆ ಈ ದೇಣಿಗೆ ಬಳಕೆಯಾಗಲಿದೆ.

ತಂಡ:

ಕರುಣ್ ನಾಯರ್(ನಾಯಕ), ಮನೀಶ್ ಪಾಂಡೆ (ಹಂಗಾಮಿ ನಾಯಕ), ಪ್ರಸಿದ್ದ್ ಕೃಷ್ಣ, ಕೃಷ್ಣಪ್ಪ ಗೌತಮ್, ಎಂ.ಆರ್.ಜಯಂತ್, ಗೌತಮ್ ಸಾಗರ್, ಎಸ್.ಎಂ.ಸಮಂತ್, ಕೆ.ಎಸ್‌ಲಂಕೇಶ್, ಶಿಖರ್ ಶೆಟ್ಟಿ, ಎಲ್.ಆರ್.ಕುಮಾರ್, ಗೌತಮ್ ಮಿಶ್ರಾ, ಎಸ್.ಯು.ಕಾರ್ತಿಕ್, ಹರ್ಷಿಲ್ ಧರ್ಮಾನಿ, ಕುಶಾಲ್ ವಾದ್ವಾನಿ, ಧನುಷ್ ಗೌಡ, ಯಶೋವರ್ಧನ್ ಪರಂತಾಪ್, ಎಂ.ವೆಂಕಟೇಶ್ , ಸಮಿತ್ ಕುಮಾರ್, ಶರತ್ ಶ್ರೀನಿವಾಸ್, ಸಿ.ಎ.ಕಾರ್ತಿಕ್.

------

ತಂಡಕ್ಕೆ ಮನೀಶ್ ಪಾಂಡೆ, ಪ್ರಸಿದ್ಧ್ ಕೃಷ್ಣ, ಕೆ.ಗೌತಮ್ ಸೇರ್ಪಡೆಯಿಂದ ಮತ್ತಷ್ಟು ಬಲ ಬಂದಿದೆ. ಈ ಬಾರಿಯೂ ಪ್ರಶಸ್ತಿ ಗೆಲ್ಲುವುದೇ ನಮ್ಮ ಗುರಿಯಾಗಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ.

ಕರುಣ್ ನಾಯರ್

ಮೈಸೂರು ವಾರಿಯರ್ಸ್‌ ತಂಡದ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net